ಯೋಗ, ಯೋಗ್ಯತೆ ಬಗ್ಗೆ ಮಾತನಾಡಲು ಕನಿಷ್ಠ ಅರ್ಹತೆಯಾದರೂ ಇದೆಯಾ? : ಛಲವಾದಿ ನಾರಾಯಣಸ್ವಾಮಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

Update: 2025-03-25 20:55 IST
ಯೋಗ, ಯೋಗ್ಯತೆ ಬಗ್ಗೆ ಮಾತನಾಡಲು ಕನಿಷ್ಠ ಅರ್ಹತೆಯಾದರೂ ಇದೆಯಾ? : ಛಲವಾದಿ ನಾರಾಯಣಸ್ವಾಮಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

 ಛಲವಾದಿ ನಾರಾಯಣಸ್ವಾಮಿ/ಬಿ.ಕೆ.ಹರಿಪ್ರಸಾದ್

  • whatsapp icon

ಬೆಂಗಳೂರು : ಯೋಗ, ಯೋಗ್ಯತೆ ಬಗ್ಗೆ ಮಾತನಾಡಲು ಕನಿಷ್ಟ ಅರ್ಹತೆಯಾದರೂ ಇದೆಯಾ ಎಂದು ಹೆಗಲು ಮುಟ್ಟಿಕೊಂಡು ನೋಡಿಕೊಳ್ಳಬೇಕಿತ್ತು ಛಲವಾದಿ ನಾರಾಯಣಸ್ವಾಮಿ ಅವರೇ. ನಿಮ್ಮ ಹೋರಾಟ, ಹಾರಾಟ, ಚೀರಾಟ, ಪರೋಟಾಗಳ ಆಳ-ಅಗಲ ಎಲ್ಲವನ್ನೂ ಬಲ್ಲೆ. ಅದರ ಬಗ್ಗೆ ಮಾತಾಡುವಂತೆ ಪ್ರಚೋದಿಸಿ ಮತ್ತಷ್ಟು ಬೆತ್ತಲಾಗಬೇಡಿ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ಧಮ್ ಬಿರಿಯಾನಿಯೊಂದಕ್ಕೇ ನಿಮ್ಮ ಧಮ್ ಇಳಿದಂತಿದೆ. ಮೋದಿಯವರ ಅನಾಚಾರಗಳನ್ನು ಸಮರ್ಥಿಸಲು ಹೋಗಿ ಮೈ ಎಲ್ಲಾ ಪರಚಿಕೊಂಡು ಗಾಯ ಮಾಡಿಕೊಂಡರೆ ಯಾರು ಹೊಣೆ? ಅದಕ್ಕೆ ಯೋಗ, ಯೋಗ್ಯತೆ ಎಂದು ಜ್ಯೋತಿಷಿಗಳಂತೆ ಮಾತನಾಡಲು ಶುರು ಮಾಡಿದಂತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಮೋದಿಯ ಅನಾಚರಗಳ ಬಗ್ಗೆ ಹಿಂದೆಯೂ ಮಾತಾಡಿದ್ದೇನೆ, ಈಗಲು ಮಾತಾಡುತ್ತಿದ್ದೇನೆ, ಮುಂದೆಯೂ ಮಾತಾಡುತ್ತೇನೆ. ಮೋದಿಯವರನ್ನು ಸಮರ್ಥನೆ ಮಾಡುವ ಭರದಲ್ಲಿ ನಿಮ್ಮ ಬುಡಕ್ಕೆ ತಂದುಕೊಂಡು ನನ್ನ ಕೈಗೆ ದೊಣ್ಣೆ ಕೊಟ್ಟು ಬಡಿಸಿಕೊಳ್ಳಬೇಡಿ ಎಂದು ಹರಿಪ್ರಸಾದ್ ಎಚ್ಚರಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ತತ್ವ, ಸಿದ್ದಾಂತ ಹಾಗೂ ಗಾಂಧಿ ಕುಟುಂಬದ ನಿಷ್ಟೆ ನನಗೆ ಸಿಕ್ಕಿರುವ ಯೋಗವಾದರೇ, ತಳ ಸಮುದಾಯಗಳು, ಶೋಷಿತ ಸಮುದಾಯಗಳನ್ನು ತುಳಿಯುವ ಸಂಘ ಪರಿವಾರದವರ ಮುಖವಾಡವನ್ನು ಬಿಚ್ಚಿಡುವುದು ಕೂಡ ನನಗೆ ಸಿಕ್ಕಿರುವ ಯೋಗವೇ ಎಂದು ಭಾವಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಸಾಮಾಜಿಕ ನ್ಯಾಯಕ್ಕಾಗಿ ಸ್ವಪಕ್ಷವೇ ಇರಲಿ, ಅಧಿಕಾರದಲ್ಲಿ ಕೂತಿರುವವರು ಯಾರೇ ಇರಲಿ ಪ್ರಶ್ನಿಸುವುದು ನನ್ನ ಯೋಗವೇ. ಆದರೆ ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರಿ ಅಧಿಕಾರಕ್ಕಾಗಿ ಯಾರೋ ಬಳಸಿ ಬಿಸಾಡಿದ್ದ ಚೆಡ್ಡಿಯನ್ನು ತಲೆಯ ಮೇಲೆ ಹೊತ್ತು ತಿರುಗುವುದೇ ನಿಮಗೆ ಸಿಕ್ಕ ಯೋಗ್ಯತೆ ಎಂದು ಭಾವಿಸಿದ್ದರೆ ನಿಮ್ಮ ಕರ್ಮ ಎಂದು ಹರಿಪ್ರಸಾದ್ ಹೇಳಿದ್ದಾರೆ.

ಅಧಿಕಾರದಾಸೆಗೆ ನಿಮ್ಮ ಪಕ್ಷದ ನಾಯಕರನ್ನು ಹೀಯಾಳಿಸುವುದು ಬಿಡಿ, ಕನಿಷ್ಟ ಪ್ರಶ್ನೆಯನ್ನಾದರೂ ಮಾಡಿ ಖುರ್ಚಿ ಉಳಿಸಿಕೊಳ್ಳಿ. ಆಗ ನಿಮ್ಮ ‘ಛಲ’ವಾದಿಯನ್ನು ನಾನೇ ಬೆಂಬಲಿಸುತ್ತೇನೆ. ಕೇಂದ್ರ ಸರಕಾರ ಸಂವಿಧಾನದ ಮೇಲೆ ನಡೆಸುತ್ತಿರುವ ದಾಳಿಯನ್ನೇ ನಿಮ್ಮಿಂದ ಪ್ರಶ್ನಿಸಲು ಆಗುತ್ತಿಲ್ಲ. ಇನ್ನೂ ಹೀಯಾಳಿಸಿ, ನಿಮ್ಮ ಸ್ಥಾನಮಾನವನ್ನು ಉಳಿಸಿಕೊಳ್ಳಲು ಸಾಧ್ಯವೇ? ಪ್ರಶ್ನೆ ಮಾಡದೆ ಇರುವುದನ್ನೇ ನೀವು ಯೋಗ್ಯತೆ ಎಂದುಕೊಂಡರೆ ಅಂತಹ ಯೋಗ್ಯತೆಗೆ ನೀವು ಮಾತ್ರ ಭಾಜನರಾಗಲು ಸಾಧ್ಯ ಎಂದು ಅವರು ಟೀಕಿಸಿದ್ದಾರೆ.

ವಿದ್ಯಾರ್ಥಿ ದೆಸೆಯಿಂದಲೂ ಹೋರಾಟವನ್ನೇ ನಮ್ಮ ಬದುಕನ್ನಾಗಿಸಿಕೊಂಡು, ಐವತ್ತು ವರ್ಷಗಳ ಕಾಲ ಎಂದೂ ಅಧಿಕಾರಕ್ಕಾಗಿ ಪಕ್ಷ ಸಿದ್ದಾಂತವನ್ನು ಬದಲಾಯಿಸದೆ ಇರುವುದೇ ನನ್ನ ನಿಷ್ಟೆ. ಅದೇ ನನ್ನ ಯೋಗ, ಅದೇ ನನ್ನ ಯೋಗ್ಯತೆ. ಅಂತಹ ಯೋಗ-ಯೋಗ್ಯತೆಗೆ ಅರ್ಹತೆಯೂ ಬೇಕಲ್ವಾ? ಎಂದು ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News