ರಾಜ್ಯದ ಜನರೇ ಶಿವಕುಮಾರ್‌ರ ನೆಟ್ಟು ಬೋಲ್ಟ್ ಟೈಟ್ ಮಾಡುತ್ತಾರೆ : ನಿಖಿಲ್ ಕುಮಾರಸ್ವಾಮಿ

ನಿಖಿಲ್ ಕುಮಾರಸ್ವಾಮಿ
ಬೆಂಗಳೂರು : ಸಂವಿಧಾನ ಕುರಿತು ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ತಲೆಗೆ ನಟ್ಟು ಬೋಲ್ಟ್ ಇಲ್ಲದ ಕಾರಣ ಅಲ್ಲಾಡುತ್ತಿದೆ ಎಂದು ಜೆಡಿಎಸ್ ನಾಯಕ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ.
ಮಂಗಳವಾರ ನಗರದ ಶೇಷಾದ್ರಿಪುರಂನಲ್ಲಿರುವ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂವಿಧಾನ ಬದಲಾವಣೆ ಮಾಡುತ್ತೇವೆಂದು ಹೇಳಿದ್ದಾರೆ. ಆದರೆ, ಅವರ ತಲೆಗೆ ನಟ್ಟು ಬೋಲ್ಟ್ ಇಲ್ಲದ ಕಾರಣ ಅಲ್ಲಾಡುತ್ತಿದೆ ಅನ್ನಿಸುತ್ತಿದೆ. ಹೀಗೆ ಮಾತಾಡಿದರೆ ರಾಜ್ಯದ ಜನರೇ ಇವರ ನೆಟ್ಟು ಬೋಲ್ಟ್ ಟೈಟ್ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಮುಸ್ಲಿಮ್ ಮೀಸಲಾತಿ ವಿಚಾರದಲ್ಲಿ ರಾಜ್ಯಪಾಲರಿಗೆ ಜೆಡಿಎಸ್ ಶಾಸಕರು ಮತ್ತು ಬಿಜೆಪಿಯವರು ಒಟ್ಟಾಗಿ ದೂರು ಕೊಟ್ಟಿದ್ದಾರೆ. ಹಾಗಾಗಿ, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಬಿಜೆಪಿ ಜೊತೆ ಒಟ್ಟಾಗಿ ಹೋಗುತ್ತೇವೆ. ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇವೆ. ಅಲ್ಲದೆ, ಧರ್ಮಾಧಾರಿತ ಮೀಸಲಾತಿಗೆ ಅವಕಾಶ ಇಲ್ಲ ಎಂದು ಅವರು ತಿಳಿಸಿದರು.
ಹನಿಟ್ರ್ಯಾಪ್ ವಿಚಾರಕ್ಕೆ ಮಾತನಾಡಿದ ಅವರು, ದೇವಾಲಯದಂತ ವಿಧಾನಸೌಧದಲ್ಲಿ ‘ಬೆಳ್ಳಗೆ ಮನಿ, ಸಂಜೆ ಹನಿ’ ಬಗ್ಗೆ ಚರ್ಚೆ ಆಗುತ್ತಿದೆ. ಈ ಸರಕಾರ ಮನಿ-ಹನಿ ಸರಕಾರ ಆಗಿದೆ. ಸದನದ ಒಳಗೆ ಸಚಿವ ರಾಜಣ್ಣ ಅವರು ಆರೋಪ ಮಾಡಿದ್ದರು. ಕ್ಯಾಬಿನೆಟ್ ಸಚಿವರಿಗೆ ರಕ್ಷಣೆ ಇಲ್ಲ. ಬೇರೆ ಅವರ ಕತೆ ಏನು? 48 ಜನರ ಸಿಡಿ ಇದೆ ಎನ್ನುತ್ತಾರೆ. ಒಂದು ಕುರ್ಚಿಗೋಸ್ಕರ ಈ ಮಟ್ಟಕ್ಕೆ ರಾಜಕೀಯ ಮಾಡುತ್ತಿದ್ದು, ಸಿಡಿ ಫ್ಯಾಕ್ಟರಿ ಮಾಲಕರ ಯಾರು? ಎಂದು ನಿಖಿಲ್ ಪ್ರಶ್ನಿಸಿದ್ದಾರೆ.