ʼಹೈಕೋರ್ಟ್ ಲಾಯರ್ ಎಂದು ಪರಿಚಯಿಸಿಕೊಂಡಿದ್ದರುʼ : ಹನಿಟ್ರ್ಯಾಪ್ ಪ್ರಕರಣದ ಕುರಿತು ರಾಜಣ್ಣ ಹೇಳಿದ್ದೇನು?

ಕೆ.ಎನ್.ರಾಜಣ್ಣ
ಬೆಂಗಳೂರು: ರಾಜ್ಯದಾದ್ಯಂತ ಸಂಚಲನ ಮೂಡಿಸಿರುವ ಹನಿಟ್ರ್ಯಾಪ್ ಪ್ರಕರಣದ ಹಿಂದೆ ಇರುವವರು ಯಾರು ಎಂಬುದು ಇನ್ನೂ ನಿಗೂಢವಾಗಿಯೇ ಇದೆ. ಇದೀಗ ಈ ಸಂಬಂಧ ಮತ್ತಷ್ಟು ವಿಚಾರಗಳನ್ನು ಸಚಿವ ಕೆ.ಎನ್.ರಾಜಣ್ಣ ಬಹಿರಂಗಪಡಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಬಾರಿ ಮನೆಗೆ ಬಂದಾಗಲೂ ಅವರ ಜತೆಗೆ ಒಬ್ಬ ಹುಡುಗ ಇದ್ದ. ಆದರೆ ಬೇರೆಬೇರೆ ಹುಡುಗಿಯರು ಬಂದಿದ್ದರು. ಜೀನ್ಸ್ ಪ್ಯಾಂಟ್, ಬ್ಲೂ ಟಾಪ್ ಹಾಕಿಕೊಂಡಿದ್ದರು. ಹೈಕೋರ್ಟ್ ವಕೀಲರು ಎಂದು ಪರಿಚಯಿಸಿಕೊಂಡಿದ್ದರು. ‘ಪರ್ಸನಲ್ಲಾಗಿ ನಿಮ್ಮ ಜತೆಗೆ ಕುಳಿತು ಬಹಳ ಮಾತನಾಡಬೇಕಿದೆ’ ಎಂದು ಹೇಳಿಕೊಂಡಿದ್ದರು ಎಂದು ತಿಳಿಸಿದರು.
ಅಪರಿಚಿತರು ಹನಿಟ್ರ್ಯಾಪ್‌ಗೆ ಪ್ರಯತ್ನಿಸಿದ್ದು, ನನ್ನ ಬಳಿ ಅದಕ್ಕೆ ಯಾವುದೇ ದಾಖಲೆಗಳು ಇಲ್ಲ. ನನ್ನ ಬೆಂಗಳೂರಿನ ಮನೆಯಲ್ಲಿ ಸಿಸಿಟಿವಿ ಕ್ಯಾಮರಾ ಇಲ್ಲ. ಹಾಗಾಗಿ ಯಾವುದೇ ವಿಡಿಯೊ ದಾಖಲಾಗಿಲ್ಲ. ಮನೆಗೆ ಯಾರು ಬಂದಿದ್ದಾರೆ ಎಂದು ತಿಳಿದುಕೊಳ್ಳು ಪ್ರಯತ್ನಿಸಿದೆ. ಯಾವುದೇ ಮಾಹಿತಿ ಸಿಕ್ಕಿಲ್ಲ. ಸಮಯ ಸಿಗದ್ದರಿಂದ ಇದುವರೆಗೆ ದೂರು ನೀಡಿರಲಿಲ್ಲ. ಗೃಹ ಸಚಿವ ಜಿ.ಪರಮೇಶ್ವರ ಅವರನ್ನು ಭೇಟಿಮಾಡಿ ದೂರು ನೀಡುತ್ತೇನೆ ಎಂದು ತಿಳಿಸಿದರು.