ರೈತರು, ಯುವ ಉದ್ದಿಮೆದಾರರಿಗೆ ಮಾಹಿತಿ ಕೇಂದ್ರವಾದ ‘ಸಿದ್ದಗಂಗಾ’

ತುಮಕೂರು : ಅನ್ನ, ಅಕ್ಷರ, ಆಶ್ರಯ ಸೇರಿದಂತೆ ತ್ರಿವಿಧ ದಾಸೋಹಕ್ಕೆ ಹೆಸರುವಾಸಿಯಾದ ಸಿದ್ದಗಂಗಾ ಸಂಸ್ಥೆ, ಯುವಜನರಿಗಲ್ಲದೆ, ರೈತರು, ಯುವ ಉದ್ದಿಮೆದಾರರಿಗೂ ಮಾಹಿತಿ ಕೇಂದ್ರವಾಗಿ 61 ವರ್ಷಗಳಿಂದಲೂ ಕೆಲಸ ಮಾಡುತ್ತಿದೆ. ಸಿದ್ದಗಂಗಾ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಮೂಲಕ ಕೃಷಿಕರು ಮತ್ತು ಕೈಗಾರಿಕೋದ್ಯಮಿಗಳಿಗೆ ನೆರವಾಗುತ್ತಾ ಬಂದಿದೆ.
ಪ್ರತೀ ವರ್ಷ ಶಿವರಾತ್ರಿಯ ವೇಳೆ ಶ್ರೀಮಠದ ಶ್ರೀಚನ್ನಬಸವೇಶ್ವರ ಶಿಕ್ಷಕರ ತರಬೇತಿ ಕೇಂದ್ರದ ಆವರಣದಲ್ಲಿ ಶ್ರೀಸಿದ್ದಗಂಗಾ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ನಡೆಯುತ್ತವೆ. ಕೃಷಿ ಮತ್ತು ಕೃಷಿಗೆ ಪೂರಕವಾದ ಎಲ್ಲ ಇಲಾಖೆಗಳ ಸಹಕಾರದೊಂದಿಗೆ ಸುಮಾರು 15 ದಿನಗಳ ಕಾಲ ತಮ್ಮ ಮಳಿಗೆ ತೆರೆದು ಜಾತ್ರೆಗೆ ಬರುವ ಭಕ್ತರು, ರೈತರು, ಯುವಜನರಿಗೆ ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ, ಮೀನುಗಾರಿಕೆ, ಜವಳಿ ಮತ್ತು ಕೈಮಗ್ಗ, ಲೋಕೋಪಯೋಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಇಲಾಖೆಗಳಿಂದ ಮಾಹಿತಿ ಒದಗಿಸುವ ಕೆಲಸವನ್ನು 61 ವರ್ಷಗಳಿಂದ ನಿರಂತರವಾಗಿ ಮಾಡುತ್ತಾ ಬಂದಿದೆ.
1964ರಲ್ಲಿ ಶ್ರೀಸಿದ್ದಗಂಗಾ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ಸಣ್ಣದಾಗಿ ಆರಂಭಿಸಿದ್ದು, ಇಂದು ಹತ್ತಾರು ಇಲಾಖೆಗಳು ತಮ್ಮ ಮಳಿಗೆ ತೆರೆದು ಜನರಿಗೆ ವಿವರಣೆ ನೀಡುವ ಮಟ್ಟಕ್ಕೆ ಬೆಳೆದಿದೆ.
ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗ್ರಾಮಾಂತರ, ಚಿತ್ರದುರ್ಗ ಸೇರಿದಂತೆ ಗ್ರಾಮೀಣ ಭಾಗದ ಹೆಚ್ಚು ಜನರು ಜಾತ್ರೆಗೆ ಆಗಮಿಸುವ ಹಿನ್ನೆಲೆಯಲ್ಲಿ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳು, ಹೊಸ ಕೃಷಿ ಪದ್ಧತಿ, ಹೊಸ ತಳಿಗಳ, ಬೀಜೋತ್ಪಾದನೆ, ಬೀಜೋಪಚಾರ ಸೇರಿದಂತೆ ವೈಜ್ಞಾನಿಕ ಮಾಹಿತಿಗಳನ್ನು ಜನರಿಗೆ ತಿಳಿಸುವ ಗುರುತರ ಕೆಲಸವನ್ನು ಕಳೆದ 61 ವರ್ಷಗಳಿಂದಲೂ ಮಾಡಿಕೊಂಡು ಬರಲಾಗುತ್ತಿದೆ.
ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಮೀನುಗಾರಿಕೆ ಇಲಾಖೆಗಳು ವಸ್ತು ಪ್ರದರ್ಶನ ಆರಂಭವಾಗುವ ಸುಮಾರು 3 ತಿಂಗಳ ಮುಂಚೆಯೇ ತಮಗೆ ನೀಡಿರುವ ಜಾಗದಲ್ಲಿ ವಸ್ತುಪ್ರದರ್ಶನಕ್ಕೆ ಬರುವ ಜನರಿಗೆ ತೋರಿಸಲು ವಿವಿಧ ಬೆಳೆಗಳ ಪ್ರಾತ್ಯಕ್ಷಿಕೆಗಳನ್ನು ತಯಾರಿಸುತ್ತವೆ. ಅಲ್ಲದೆ ಇಲಾಖೆಯಿಂದ ಸಾರ್ವಜನಿಕರಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ದೊರೆಯುವ ಸೌಲಭ್ಯಗಳ ಪರಿಚಯವನ್ನೂ ಮಾಡಲಾಗುತ್ತದೆ.
ವಸ್ತುಪ್ರದರ್ಶನಕ್ಕೆ ಬರುವ ಜನರ ಮನರಂಜನೆಗೆ ಪ್ರತೀ ದಿನ ಸ್ಥಳೀಯ ಮತ್ತು ಹೆಸರಾಂತ ಕಲಾವಿದರಿಂದ ನಾಟಕಗಳು, ಸಂಗೀತ ಸಂಜೆ, ನೃತ್ಯ, ಶಾಲಾ, ಕಾಲೇಜುಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನೀಡಲಾಗುತ್ತದೆ. 15 ದಿನಗಳ ಕಾಲ ಸಿದ್ದಗಂಗಾ ಮಠ ವಿದ್ಯಾರ್ಥಿಗಳಿಗಲ್ಲದೆ, ಸಾರ್ವಜನಿಕರಿಗೂ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಜ್ಞಾನ ಕೇಂದ್ರವಾಗಿ ಮಾರ್ಪಾಡಾಗುತ್ತಿರುವುದು ವಿಶೇಷ.
ರಾಜ್ಯದಲ್ಲಿ ಮೈಸೂರು ದಸರಾ ವಸ್ತು ಪ್ರದರ್ಶನ ಮತ್ತು ಹಾಸನದ ಈಗಿನ ನಗರಸಭೆ ಆವರಣದಲ್ಲಿ ನಡೆಯುವ ವಸ್ತು ಪ್ರದರ್ಶನಗಳನ್ನು ಹೊರತುಪಡಿಸಿದರೆ, ತುಮಕೂರಿನ ಸಿದ್ದಗಂಗಾ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಇಷ್ಟು ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಒಂದು ದಿನಕ್ಕೆ ಕನಿಷ್ಠ ವೆಂದರೂ 50 ಸಾವಿರ ಜನರು ಭೇಟಿ ನೀಡುತ್ತಾರೆ. ಅದರಲ್ಲಿಯೂ ಜಾತ್ರೆಯ ಪ್ರಯುಕ್ತ ನಡೆಯುವ ಬೆಳ್ಳಿ ಪಲ್ಲಕ್ಕಿ ಉತ್ಸವದ ದಿನ ಶ್ರೀಮಠಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ದುಪ್ಪಟ್ಟಾಗುತ್ತದೆ. ಮಠಕ್ಕೆ ಬರುವ ಭಕ್ತರಲ್ಲಿ ಬಹುಪಾಲ ಜನರು ವಸ್ತು ಪ್ರದರ್ಶನಕ್ಕೆ ಭೇಟಿ ನೀಡುವುದು ವಾಡಿಕೆ.
ನಾನು 1976ರಿಂದಲೂ ಸಿದ್ದಗಂಗಾ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಉಸ್ತುವಾರಿ ನೋಡಿಕೊಳ್ಳುತಿದ್ದೇನೆ. ವರ್ಷದಿಂದ ವರ್ಷಕ್ಕೆ ವಸ್ತು ಪ್ರದರ್ಶನಕ್ಕೆ ಬರುವವರ ಸಂಖ್ಯೆ ಹೆಚ್ಚಿದೆ. ಕೃಷಿಕರಿಗೆ, ಜಾನುವಾರುಗಳನ್ನು ಕೊಳ್ಳುವವರು, ಮಾರಾಟ ಮಾಡುವವರಿಗೆ ಒಂದು ಒಳ್ಳೆಯ ವೇದಿಕೆಯಾಗಿ ಸಿದ್ದಗಂಗಾ ಜಾತ್ರೆ ಬಳಕೆಯಲ್ಲಿದೆ. ಅಲ್ಲದೆ ಕೃಷಿಯ ಆವಿಷ್ಕಾರಗಳು, ಕೈಗಾರಿಕೆಗಳ ಬೆಳವಣಿಗೆ ಕುರಿತು ಜನರಿಗೆ ವಸ್ತು ಪ್ರದರ್ಶನದಲ್ಲಿ ಮಾಹಿತಿ ಒದಗಿಸಲಾಗತ್ತಿದೆ. ಕೃಷಿ ಪರಿಕರಗಳ ಜೊತೆಗೆ ಇಲಾಖೆಗಳ ಸವಲತ್ತುಗಳ ಬಗ್ಗೆಯೂ ಮಾಹಿತಿ ದೊರೆಯಲಿದೆ
-ಗಂಗಾಧರಯ್ಯ, ಕಾರ್ಯದರ್ಶಿ, ಸಿದ್ದಗಂಗಾ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ