ತುಮಕೂರು: ಡಾ. ಬಿ.ಆರ್.ಅಂಬೇಡ್ಕರ್ ಅವರ 12 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ

Update: 2025-04-14 23:48 IST
ತುಮಕೂರು: ಡಾ. ಬಿ.ಆರ್.ಅಂಬೇಡ್ಕರ್ ಅವರ 12 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ
  • whatsapp icon

ತುಮಕೂರು : ನಗರದ ಟೌನ್‌ಹಾಲ್ ಮುಂಭಾಗದಲ್ಲಿ ನೂತನವಾಗಿ ಸ್ಥಾಪಿಸಲಾದ ಸಂವಿಧಾನಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 12 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಹಾಗೂ ಮಹಾನಗರ ಪಾಲಿಕೆ ಆವರಣದಲ್ಲಿ ಅಳವಡಿಸಲಾದ 'ಲೈಟ್ ಯುಟಿಲಿಟಿ ಹೆಲಿಕಾಪ್ಟರ್' ಮಾದರಿಯನ್ನು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ತಾ.ಜಿ.ಪರಮೇಶ್ವರ್‌ ಅವರು ಉದ್ಘಾಟಿಸಿದ್ದಾರೆ.

ಬಳಿಕ ಮಾತನಡಿದ ಸಚಿವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ನೀಡದೇ ಹೋಗಿದ್ದರೆ ಭಾರತ ಯಾವ ಸ್ಥಾನಮಾನದಲ್ಲಿ ಇರುತ್ತಿತ್ತು ಎಂಬುದು ಊಹಿಸಲು ಸಾಧ್ಯವಿಲ್ಲ. ಸ್ವಾತಂತ್ರ್ಯದ ನಂತರ ಪ್ರತಿಯೊಂದು ಜಾತಿ, ಧರ್ಮದವರು ಸಮಾನವಾಗಿ ಬಾಳಬೇಕೆಂಬ ಮಾತುಗಳು ಕೇಳಿ ಬಂದಾಗ ಸಂವಿಧಾನ ರಚಿಸುವ ಜವಾಬ್ದಾರಿ ಅಂಬೇಡ್ಕರ್‌ ಹೆಗಲ ಮೇಲೆ ಬೀಳುತ್ತದೆ. ಪ್ರತಿಯೊಬ್ಬ ಭಾರತೀಯನಿಗೆ ಸಮಾನತೆ ಸಿಗಬೇಕು. ಭ್ರಾತೃತ್ವ, ಸಹೋದರತ್ವದಿಂದ ಬಾಳಬೇಕು. ಈ ಎಲ್ಲ ವೈವಿದ್ಯಮಯವಾದ ಚಿಂತನೆಯಿಂದ ಸಂವಿಧಾನ ಕೊಟ್ಟಿದ್ದಾರೆ. ಯಾವುದೇ ರಾಜ್ಯದ ಅಧಿವೇಶನ, ಲೋಕಸಭೆ ಅಧಿವೇಶನ ನಡೆದರೂ ಬಾಬಾ ಸಾಹೇಬ್‌ರನ್ನು ನೆನಪು ಮಾಡಿಕೊಳ್ಳದ ದಿನವೇ ಇಲ್ಲ ಎಂದರು.

ಈ ದೇಶದಲ್ಲಿ ಸಮಾನತೆ ಬರಬೇಕು. ಜಾತಿವ್ಯವಸ್ಥೆ ನಮ್ಮನ್ನು ತಿನ್ನುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಬಾಬಾ ಸಾಹೇಬ್ ಅಂಬೇಡ್ಕರ್‌ ಹಿಂದೂ ವಿರೋಧಿಯಲ್ಲ. ಹಿಂದೂ ಸಮಾಜವನ್ನು ಬದಲಾವಣೆ ಮಾಡಲು ಮುಂದಾದರು. ಮನುಸ್ಮೃತಿಯನ್ನು ಸುಟ್ಟರು. ಆದರೂ ಬದಲಾವಣೆ ಆಗಲಿಲ್ಲ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ, ಸಹಕಾರ ಸಚಿವ ಕೆ.ಎನ್.ರಾಜಣ್ಣ, ರಾಜ್ಯ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ ಗೌಡ, ಡಾ.ಎಚ್.ಡಿ.ರಂಗನಾಥ್, ಎಚ್.ವಿ.ವೆಂಕಟೇಶ್, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಸಿ.ವೇಣುಗೋಪಾಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News