ನಮ್ಮ ಜ್ಞಾನ ವೈಜ್ಞಾನಿಕವಾಗಿ, ವೈಚಾರಿಕವಾಗಿ ಇರಬೇಕು: ಸಿಎಂ ಸಿದ್ದರಾಮಯ್ಯ

Update: 2025-04-19 21:45 IST
ನಮ್ಮ ಜ್ಞಾನ ವೈಜ್ಞಾನಿಕವಾಗಿ, ವೈಚಾರಿಕವಾಗಿ ಇರಬೇಕು: ಸಿಎಂ ಸಿದ್ದರಾಮಯ್ಯ

Photo credit: X/@siddaramaiah

  • whatsapp icon

ತುಮಕೂರು: ಹಿಂದೆ ಸಂಸ್ಕೃತ ಕಲಿಯುವವರಿಗೆ, ಶಿಕ್ಷಣ ಕಲಿಯುವ ಇತರರಿಗೆ ಕಾದ ಸೀಸದ ಶಿಕ್ಷೆ ಇತ್ತು. ಆದರೆ ನಮಗೀಗ ಶಿಕ್ಷಣ ಸಿಕ್ಕಿದೆ. ಅನುಭವಗಳನ್ನು ದಾಖಲಿಸಿ. ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಕುರುಬ ಸಾಂಸ್ಕೃತಿಕ‌ ಪರಿಷತ್,ಪ್ರಜಾಪ್ರಗತಿ ದಿನಪತ್ರಿಕೆ ಹಾಗೂ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕುರುಬ ಸಮಾಜದ ಸಾಂಸ್ಕೃತಿಕ‌ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಕುರುಬ ಸಮುದಾಯದ ಸಂಸ್ಕೃತಿ ದರ್ಶನ ಮಾಲೆಯ 31 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಮ್ಮ ಜ್ಞಾನ ತಿಳಿವಳಿಕೆಯಲ್ಲಿ ಸ್ಪಷ್ಟತೆ ಇರಬೇಕು. ಕರ್ಮ ಸಿದ್ಧಾಂತವನ್ನು ದಿಕ್ಕರಿಸುವ ವೈಜ್ಞಾನಿಕವಾಗಿ, ವೈಚಾರಿಕವಾಗಿ ಇರಬೇಕು. ಆಗ ಮಾತ್ರ ಗುಲಾಮಗಿರಿಯಿಂದ ಹೊರಗೆ ಬರಬಹುದು. ಸತ್ಯ ಹೇಳುವ ಚಾತಿ ಬೆಳೆಸಿಕೊಳ್ಳಬಹುದು ಎಂದರು.

ಕಾಳಿದಾಸನ ನಾಲಗೆ ಮೇಲೆ ಬ್ರಹ್ಮ‌ ಅಕ್ಷರ ಬರೆದದ್ದಕ್ಕೆ ಮಹಾ ಸಾಹಿತಿಯಾದ ಎನ್ನುವ ಮಾತನ್ನೆಲ್ಲಾ ನಂಬಬೇಡಿ. ವಾಲ್ಮೀಕಿ ದರೋಡೆಕೋರ ಆಗಿದ್ದ ಅನ್ನುವುದನ್ನೆಲ್ಲಾ ನಂಬಬೇಡಿ. ಶೂದ್ರರು ವಿದ್ಯಾವಂತರಾಗಿ ಏನಾದರೂ ಮಹತ್ವವಾದದ್ದನ್ನು ಬರೆದರೆ ಅವರ ಬಗ್ಗೆ ಇಂಥಾ ಕತೆಗಳನ್ನು ಕಟ್ಟಿ ಬಿಡ್ತಾರೆ ಹುಷಾರು ಎಂದು ಎಚ್ಚರಿಸಿದರು.

ಬಸವಣ್ಣ 850 ವರ್ಷಗಳ ಹಿಂದೆಯೇ ಅನುಭವ ಮಂಟಪ ರಚಿಸಿ ಸಮ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದರು. ಪ್ರಗತಿಪರ ವಿಚಾರಗಳನ್ನು ಇಟ್ಟುಕೊಂಡವರಿಗೆ ನಿರಂತರವಾಗಿ ಸಮಸ್ಯೆ ಬರುತ್ತಲೇ ಇರುತ್ತವೆ. ಹೀಗಾಗಿ ಪ್ರಗತಿಪರ ವಿಚಾರಗಳ ಜೊತೆ ನೀವು ಸದಾ ಗಟ್ಟಿಯಾಗಿ ನಿಲ್ಲಬೇಕು. ಪ್ರಗತಿಪರ ವಿಚಾರಗಳ ಜೊತೆಗೆ ನಾವು ನಿಲ್ಲದೆ ಸಮ ಸಮಾಜ ಬರಬೇಕು ಎಂದರೆ ಸಾಧ್ಯವಿಲ್ಲ ಎಂದು ವಿವರಿಸಿದರು.

ಜಾತಿಗೆ ಚಲನ ಇಲ್ಲ. ವರ್ಗಕ್ಕೆ ಚಲನೆ ಇಲ್ಲ. ಜಾತಿ ವ್ಯವಸ್ಥೆ ನಿಂತ ನೀರು. ಚಲನೆ ಇಲ್ಲ. ಆರ್ಥಿಕ ಚಲನೆ ಸಿಕ್ಕಾಗ ಮಾತ್ರ ಜಾತಿಯಲ್ಲೂ ಚಲನೆ ಸಿಗುತ್ತದೆ. ಈ ಚಲನೆ ಸಿಗಬೇಕಾದರೆ ಶಿಕ್ಷಣದ ಅಗತ್ಯ ಇದೆ ಎಂದರು.

ಜಾತಿ ಮುಕ್ತ ಮಾನವೀಯ ಸಮಾಜ ನಿರ್ಮಾಣ ನಮ್ಮ ಸಂವಿಧಾನದ ಆಶಯ ಮತ್ತು ಬದ್ಧತೆ. ಆದರೆ ಇವತ್ತಿಗೂ ಅಸ್ಪೃಶ್ಯತೆ ಹೋಗಿಲ್ಲದಿರುವುದು, ಶೈಕ್ಷಣಿಕ ಸಮಾನತೆ ಇಲ್ಲದಿರುವುದು ಬೇಸರದ ಸಂಗತಿ.ನಾನು ಶಿಕ್ಷಣ ಪಡೆದಿರುವುದು ನನ್ನ ಸ್ವಾರ್ಥಕ್ಕೆ ಅಲ್ಲ. ಅವಕಾಶ ವಂಚಿತ ಸಮುದಾಯಗಳ ಬಿಡುಗಡೆಗಾಗಿ ವಿದ್ಯೆ ಸಂಪಾದನೆ ಮಾಡಿದ್ದೇನೆ ಎನ್ನುವ ಅಂಬೇಡ್ಕರ್ ಅವರ ಮಾತನ್ನು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನ ಬರದೇ ಇದ್ದರೆ ನಾವು, ನೀವು ಶಿಕ್ಷಣ ಪಡೆಯಲು ಸಾಧ್ಯವಿರಲಿಲ್ಲ ಎಂದು ಸಿದ್ದರಾಮಯ್ಯ ನುಡಿದರು‌.

ಮನುಸ್ಮೃತಿ ಕಾರಣದಿಂದ ಜಾತಿ ಅಸಮಾನತೆ, ಜಾತಿ ಶೋಷಣೆ, ಜಾತಿ ದೌರ್ಜನ್ಯ ಹೆಚ್ಚಾಯಿತು.ಪಟ್ಟಭದ್ರರು ಹಿಂದಿನ ಜನ್ಮದ ಕರ್ಮ ಎಂದು ನಂಬಿಸಿ ಜನರನ್ನು ವಂಚಿಸುತ್ತಿದ್ದಾರೆ. ಅದಕ್ಕೇ ಬಸವಣ್ಣನವರು ಕರ್ಮ ಸಿದ್ಧಾಂತವನ್ನು ತಿರಸ್ಕರಿಸಿದರು. ನಿಮ್ಮಲ್ಲಿ ಎಷ್ಟು ಜನ ಕರ್ಮ ಸಿದ್ಧಾಂತ ತಿರಸ್ಕರಿಸಿದ್ದೀರೋ ಗೊತ್ತಿಲ್ಲ.ಬ್ರಹ್ಮ ಒಬ್ಬರಿಗೆ ಶಿಕ್ಷಣ, ಮತ್ತೊಬ್ಬರಿಗೆ ಅನಕ್ಷರತೆ ಸಿಗಲಿ ಅಂತ ಬರೆದರಾ? ಒಬ್ಬನಿಗೆ ಬಡವನಾಗು, ಮತ್ತೊಬ್ಬನಿಗೆ ಶ್ರೀಮಂತನಾಗು ಅಂತ ಬ್ರಹ್ಮ ಬರೆದರಾ ? ಒಬ್ಬ ಹೊಟ್ಟೆತುಂಬ ಉಣ್ಣಬೇಕು, ಉಳಿದವರು ಹಸಿವಿನಿಂದ ಬಿದ್ದಿರಬೇಕು ಎಂದು ಬ್ರಹ್ಮ ಬರೆದುಬಿಟ್ಟರಾ ಎಂದು ಪ್ರಶ್ನಿಸಿದರು.

ಪಟ್ಟಭದ್ರರು ಬಸವಣ್ಣನವರ ಕ್ರಾಂತಿ ಮುಂದುವರೆಸಲು ಬಿಡಲಿಲ್ಲ. ಆದ್ದರಿಂದ ನಾವು ವೈಜ್ಞಾನಿಕವಾಗಿ, ವೈಚಾರಿಕವಾಗಿ ಚಿಂತಿಸುವುದು ಅಗತ್ಯ.ಅಹಿಂದ ಸಮಾಜ ಮತ್ತು ಎಲ್ಲಾ ಜಾತಿ, ಧರ್ಮಗಳ ಬಡತನ, ಹಸಿವು ನಿವಾರಣೆ ಆಗಬೇಕು. ಅನ್ನಕ್ಕಾಗಿ ಯಾರೂ ಇನ್ನೊಬ್ಬರ ಮನೆ ಬಾಗಿಲಿಗೆ ಹೋಗಿ ನಿಲ್ಲಬಾರದು ಎನ್ನುವ ಕಾರಣದಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದೆ.ಕಾಯಕ, ದಾಸೋಹ ಬಸವಣ್ಣನವರ ತತ್ವ. ಇದನ್ನು ಎಲ್ಲರೂ ಪಾಲಿಸಬೇಕು ಎಂದರು.

ಎಲ್ಲಾ ಶ್ರಮಿಕ ವರ್ಗಗಳ ಸಂಸ್ಕೃತಿ, ಆಚಾರ, ವಿಚಾರ ಹೊರಗೆ ಬರಬೇಕು. ಇದಕ್ಕಾಗಿ ಎಲ್ಲರೂ ಸಾಹಿತ್ಯ ರಚನೆಯಲ್ಲಿ ತೊಡಗೇಕು.ಹಿಂದೆ ಸಂಸ್ಕೃತ ಕಲಿಯುವವರಿಗೆ ಕಾದ ಸೀಸದ ಶಿಕ್ಷೆ ನಿಗಧಿಯಾಗಿತ್ತು. ಆದರೆ ಈಗ ಶಿಕ್ಷಣ ಸಿಕ್ಕಿದೆ. ನಿಮ್ಮ ನಿಮ್ಮ‌ಅನುಭವಗಳನ್ನು ದಾಖಲಿಸಿ. ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ. ನಮ್ಮ ಜ್ಞಾನ ವೈಜ್ಞಾನಿಕವಾಗಿ, ವೈಚಾರಿಕವಾಗಿ ಇರಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ನಗರಾಭಿವೃದ್ಧಿ ಸಚಿವ ಸುರೇಶ್,ಕುರುಬರ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಹೆಚ್‌.ಎಂ.ರೇವಣ್ಣ, ಡಾ.ಎಂ.ಆರ್.ಹುಲಿನಾಯ್ಕರ್, ಎಸ್.ನಾಗಣ್ಣ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News