ತಿಪಟೂರು | ಜಮಾಅತೆ ಇಸ್ಲಾಮೀ ಹಿಂದ್, ಹೆಚ್.ಆರ್.ಎಸ್ ತಿಪಟೂರು ವತಿಯಿಂದ ಸೌಹಾರ್ದ ಇಫ್ತಾರ್ ಕೂಟ

ತಿಪಟೂರು : ʼಬಡ್ಡಿಯಿಂದಾಗಿ ಇಂದು ಆರ್ಥಿಕತೆಯು ಪಾತಾಳಕ್ಕೆ ಇಳಿದಿದ್ದು, ಇಸ್ಲಾಮಿನಲ್ಲಿ ಬಡ್ಡಿಯನ್ನು ನಿಷೇಧಿಸಲಾಗಿದೆ. ಇಸ್ಲಾಮಿನ ಝಕಾತ್ ವ್ಯವಸ್ಥೆಯು ಇಡೀ ಜಗತ್ತಿಗೆ ಮಾದರಿಯಾಗಿದೆʼ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಬಿ.ಶಶಿಧರ್ ಹೇಳಿದರು,
ಅವರು ಜಮಾಅತೆ ಇಸ್ಲಾಮೀ ಹಿಂದ್ ಹಾಗೂ ಹೆಚ್.ಆರ್.ಎಸ್ ತಿಪಟೂರು ಇದರ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡಿದರು.
ಲೇಖಕರು ಹಾಗೂ ಸಾಹಿತಿ ಎಸ್.ಗಂಗಾಧರಯ್ಯ ಮಾತನಾಡಿ, ʼಮನುಷ್ಯನ ಗುಣ ಕೂಡಿ ಬಾಳುವಂತಹದ್ದು, ಕೋಮುವಾದ ಜನಾಂಗೀಯವಾದ ಮಾನವ ಸಮಾಜದ ಶತ್ರುಗಳು ಅವುಗಳನ್ನು ಮೆಟ್ಟಿ ನಿಲ್ಲಲು ನಮಗೆ ಸಾಧ್ಯವಾಗಬೇಕುʼ ಎಂದು ಹೇಳಿದರು.
ಆದಿತ್ಯವಾಣಿಯ ಸಂಪಾದಕ ತಿಪಟೂರು ಕೃಷ್ಣ ಅವರು ಮಾತನಾಡಿ, ಉಪವಾಸದಿಂದಾಗಿ ಮನುಷ್ಯನು ದೈಹಿಕ ಆರೋಗ್ಯ ಪಡೆಯುವುದರ ಜೊತೆಗೆ ಆಧ್ಯಾತ್ಮಿಕ ಬೆಳವಣಿಗೆಯು ಆಗುತ್ತದೆ. ರಮಝಾನ್ ಮಾಸವು ನಮ್ಮೆಲ್ಲರ ಪಾಲಿಗೆ ಶಾಂತಿ ಯನ್ನು ತರಲಿʼ ಎಂದು ಆಶಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಮಾತನಾಡಿ, ʼಕೆಡುಕನ್ನು ಒಳಿತಿನಿಂದ ಮಾತ್ರ ಎದುರಿಸಲು ಸಾಧ್ಯ, ನಾವು ದ್ವೇಷವನ್ನು ದ್ವೇಷಿಸಬೇಕೆ ಹೊರತು, ದ್ವೇಷ ಹರಡುವವರನ್ನಲ್ಲʼ ಎಂದು ಹೇಳಿದರು.
ಬೆಲೆ ಕಾವಲು ಸಮಿತಿಯ ಕಾರ್ಯದರ್ಶಿ ಶ್ರೀಕಾಂತ ಕೆಳಹಟ್ಟಿ ಮಾತನಾಡಿ, ಸಾಮರಸ್ಯ, ಸೌಹಾರ್ದತೆ ಅಗತ್ಯವಾಗಿದೆ ಎಲ್ಲ ಧರ್ಮಿಯರು ಅದಕ್ಕಾಗಿ ಶ್ರಮಿಸಬೇಕುʼ ಎಂದು ಕರೆ ನೀಡಿದರು.
ಇಂಜಿನೀಯರ್ ಸಾದತ್ ಪ್ರಾಸ್ತಾವಿಕ ಭಾಷಣ ಮಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ತಿಪಟೂರಿನ ಸ್ಥಾನಿಯ ಅಧ್ಯಕ್ಷರು ಲಿಯಾಕತ್ ಅಲಿ, ಮತ್ತಿತರರು ಉಪಸ್ಥಿತರಿದ್ದರು.


