ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ವಿ.ಸೋಮಣ್ಣ

ಬೆಂಗಳೂರು : ಕೇಂದ್ರ ಜಲಶಕ್ತಿ ಮತ್ತು ರೇಲ್ವೆ ರಾಜ್ಯ ಖಾತೆಯ ಸಚಿವ ವಿ.ಸೋಮಣ್ಣ ಅವರು ಸೋಮವಾರ ಹೊಸದಿಲ್ಲಿಯ ಸಂಸತ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಭೇಟಿಯ ಸಂದರ್ಭದಲ್ಲಿ ಸೋಮಣ್ಣ ಅವರು, ಕಳೆದ 8 ತಿಂಗಳಲ್ಲಿ ರೇಲ್ವೆ ಇಲಾಖೆಯಲ್ಲಿನ ಅಭಿವೃದ್ದಿ, ಅರುಣಾಚಲ ಪ್ರದೇಶ, ಆಸ್ಸಾಂ, ಛತೀಸ್ಗಡ್, ಜಾರ್ಖಂಡ್ ಮತ್ತು ಮಹಾತ್ವಾಕಾಂಕ್ಷಿ ಜಿಲ್ಲೆಗಳ ಭೇಟಿ, ಮತ್ತು ಅಲ್ಲಿನ ಅಭಿವೃದ್ಧಿ ಕಾರ್ಯಗಳು, ಕೇಂದ್ರ ಸರಕಾರದ ಯೋಜನೆಗಳ ಅನುಷ್ಠಾನ ಕುರಿತ ಮಾಹಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸಿದ್ದಾರೆ.
ದಕ್ಷಿಣ ಭಾರತದ ವಿವಿಧ ರಾಜ್ಯಗಳಾದ, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ ಮತ್ತು ಪುದುಚೇರಿ ರಾಜ್ಯಗಳಲ್ಲಿ ತಾವು ಪ್ರವಾಸ ಹಮ್ಮಿಕೊಂಡಿರುವ ಬಗ್ಗೆ ಮತ್ತು ಅಲ್ಲಿನ ರೇಲ್ವೆ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ತಮ್ಮ ಲೋಕಸಭಾ ಕ್ಷೇತ್ರ ತುಮಕೂರಿನಲ್ಲಿ ರೇಲ್ವೆ, ರಸ್ತೆ ಮತ್ತು ಕೇಂದ್ರದ ವಿವಿಧ ಯೋಜನೆಗಳಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಕೇಂದ್ರ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿ, ತುಮಕೂರಿನ ಇನ್ನಷ್ಟು ಅಭಿವೃದ್ದಿಗೆ ಸಹಕಾರ ನೀಡುವಂತೆ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಕಾರ್ಯವೈಖರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.