ಕರ್ನಾಟಕದಲ್ಲಿ ಸೇವೆ ಸಲ್ಲಿಸಿರುವ ಅಣ್ಣಾಮಲೈಗೆ ನಮ್ಮ ಸಾಮರ್ಥ್ಯ ಏನೆಂಬುದು ತಿಳಿದಿದೆ: ಡಿ.ಕೆ.ಶಿವಕುಮಾರ್

Update: 2025-03-22 22:41 IST
ಕರ್ನಾಟಕದಲ್ಲಿ ಸೇವೆ ಸಲ್ಲಿಸಿರುವ ಅಣ್ಣಾಮಲೈಗೆ ನಮ್ಮ ಸಾಮರ್ಥ್ಯ ಏನೆಂಬುದು ತಿಳಿದಿದೆ: ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್,ಅಣ್ಣಾಮಲೈ

  • whatsapp icon

ಚೆನ್ನೈ/ಬೆಂಗಳೂರು: ಶನಿವಾರ ನಾನು ಚೆನ್ನೈ ತಲುಪಿದಾಗ, ನನ್ನ ವಿರುದ್ಧ ಬಿಜೆಪಿ ನಡೆಸಿದ ಕಪ್ಪು ಬಾವುಟ ಪ್ರದರ್ಶನವನ್ನು ಸ್ವಾಗತಿಸಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕ್ಷೇತ್ರ ಪುನರ್ವಿಂಗಡಣೆ ತಯಾರಿಯ ಕುರಿತು ಚರ್ಚಿಸಲು ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕರೆದಿದ್ದ ಸಭೆಯಲ್ಲಿ ಭಾಗವಹಿಸಲು ಡಿ.ಕೆ.ಶಿವಕುಮಾರ್ ಶನಿವಾರ ಚೆನ್ನೈಗೆ ತೆರಳಿದ್ದರು.

ಜನಸಂಖ್ಯೆಯ ಆಧಾರದಲ್ಲಿ ಕ್ಷೇತ್ರ ಪುನರ್ವಿಂಗಡಣೆಯನ್ನೇನಾದರೂ ನಡೆಸಿದರೆ, ನಾವು ನಮ್ಮ ಹಿಡಿತವನ್ನು ಕಳೆದುಕೊಳ್ಳಲಿದ್ದೇವೆ ಎಂಬ ಅನುಮಾನವನ್ನು ಕೆಲವು ರಾಜ್ಯ ಸರಕಾರಗಳು, ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯ ಸರಕಾರಗಳು ವ್ಯಕ್ತಪಡಿಸಿವೆ.

ಈ ಕುರಿತು ಚರ್ಚಿಸಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಚೆನ್ನೈಗೆ ಆಗಮಿಸಿದ್ದ ಡಿ.ಕೆ.ಶಿವಕುಮಾರ್, ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈರನ್ನು ಬಡಪಾಯಿ ಎಂದು ಛೇಡಿಸಿದರಲ್ಲದೆ, ಅವರು ಐಪಿಎಸ್ ಅಧಿಕಾರಿಯಾಗಿದ್ದಾಗ, ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದರು ಎಂದೂ ಸ್ಮರಿಸಿದರು.

“ನಾನು ಈ ಎಲ್ಲ ಬಿಜೆಪಿಯ ಕಪ್ಪು ಬಾವುಟಗಳನ್ನು ಸ್ವಾಗತಿಸುತ್ತೇನೆ. ಅವರು ನನ್ನನ್ನು ತಿಹಾರ್ ಜೈಲಿಗೆ ಕಳಿಸಿದಾಗಲೂ ನಾನು ಹೆದರಲಿಲ್ಲ” ಎಂದು ಚೆನ್ನೈನಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

“ಈ ಅಧಿಕಾರಿ (ಅಣ್ಣಾಮಲೈ) ಬಡಪಾಯಿಯಾಗಿದ್ದು, ನಮ್ಮ ರಾಜ್ಯದಿಂದ ಬಂದವರಾಗಿದ್ದಾರೆ. ಅವರು ನಮ್ಮಲ್ಲಿಯೇ ಸೇವೆ ಸಲ್ಲಿಸಿದ್ದು, ಅವರಿಗೆ ನಮ್ಮ ಸಾಮರ್ಥ್ಯ ಏನೆಂಬುದು ತಿಳಿದಿದೆ. ಅವರು ತಮ್ಮ ಕೆಲಸವನ್ನು ಮಾಡಲಿ. ನಾನವರಿಗೆ ಶುಭ ಹಾರೈಸುತ್ತೇನೆ” ಎಂದು ಅವರು ಹೇಳಿದರು.

ಅದಕ್ಕೆ ಪ್ರತಿಯಾಗಿ, “ಈ ಬಡಪಾಯಿಗೆ ಶುಭ ಹಾರೈಸಿದ್ದಕ್ಕೆ ಧನ್ಯವಾದಗಳು” ಎಂದು ಅಣ್ಣಾಮಲೈ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ಹೌದು, ನಾನು ಶ್ರದ್ಧೆಯಿಂದ ಪೊಲೀಸ್ ಅಧಿಕಾರಿಯಾಗಿ ಕರ್ನಾಟಕದ ಜನತೆಗೆ ಸೇವೆ ಸಲ್ಲಿಸಿದ್ದೆ. ಈ ಗಮನಾರ್ಹ ಸಂಗತಿಯನ್ನು ಉಲ್ಲೇಖಿಸಿದ್ದಕ್ಕೆ ಧನ್ಯವಾದಗಳು ಮಾನ್ಯ ಡಿ.ಕೆ.ಶಿವಕುಮಾರ್ ಅವರೆ” ಎಂದು ಹೇಳಿದ್ದಾರೆ.

“ಅಲ್ಲದೆ, ಈ ಬಡಪಾಯಿಗೆ ಶುಭ ಹಾರೈಸಿದ ನಿಮಗೆ ಧನ್ಯವಾದಗಳು. ಮಾನ್ಯ ಸಿದ್ದರಾಮಯ್ಯನವರನ್ನು ಪದಚ್ಯುತಗೊಳಿಸಿ, ಕರ್ನಾಟಕದ ಮುಖ್ಯಮಂತ್ರಿಯಾಗಲು ಅವಿರತ ಪ್ರಯತ್ನಗಳನ್ನು ನಡೆಸುತ್ತಿರುವ ನಿಮಗೂ ಶುಭ ಹಾರೈಕೆಗಳು” ಎಂದೂ ಅವರು ಛೇಡಿಸಿದ್ದಾರೆ.

ಇದಕ್ಕೂ ಮುನ್ನ, ಸ್ಟಾಲಿನ್ ಆಯೋಜಿಸಿದ್ದ ಸಭೆಯನ್ನು ಬಿಜೆಪಿ ವಿರೋಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News