ಬಿಜೆಪಿ ಶಾಸಕರ ಅಮಾನತು | ಸ್ಪೀಕರ್‌ರಿಂದ ಪ್ರಜಾಪ್ರಭುತ್ವ ವಿರೋಧಿ ನಡೆ : ವಿಜಯೇಂದ್ರ

Update: 2025-03-21 20:26 IST
ಬಿಜೆಪಿ ಶಾಸಕರ ಅಮಾನತು |  ಸ್ಪೀಕರ್‌ರಿಂದ ಪ್ರಜಾಪ್ರಭುತ್ವ ವಿರೋಧಿ ನಡೆ : ವಿಜಯೇಂದ್ರ
  • whatsapp icon

ಬೆಂಗಳೂರು : ‘ಪ್ರತಿಪಕ್ಷ ಬಿಜೆಪಿಯ 18 ಮಂದಿ ಶಾಸಕರನ್ನು ಅಮಾನತುಗೊಳಿಸಿರುವ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರ ನಿರ್ಧಾರವು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದೂರಿದ್ದಾರೆ.

ಶುಕ್ರವಾರ ಸ್ಪೀಕರ್ ಕ್ರಮವನ್ನು ವಿರೋಧಿಸಿ ರಾಜ್ಯಪಾಲರಿಗೆ ದೂರು ನೀಡಿ ಬಳಿಕ ಮಾತನಾಡಿದ ಅವರು, ಆಡಳಿತ ಪಕ್ಷದ ಹಿರಿಯ ಸಚಿವ ರಾಜಣ್ಣ ಸದನದ ಒಳಗೆ ಬಂದು ಅಂಗಲಾಚಿದ್ದಾರೆ. ಹನಿಟ್ರ್ಯಾಪ್‍ಗೆ ಒಳಗಾಗಿದ್ದೇನೆ, ರಾಜ್ಯ ಹಾಗೂ ದೇಶದ 48ಕ್ಕೂ ಹೆಚ್ಚು ರಾಜಕಾರಣಿಗಳು ಹನಿಟ್ರ್ಯಾಪ್‍ಗೆ ಒಳಗಾಗಿದ್ದಾರೆ ಎಂದು ಬಹಿರಂಗವಾಗಿ ಸದನದಲ್ಲಿ ತಿಳಿಸಿದ ಸಂದರ್ಭದಲ್ಲಿ ಆ ಸಚಿವರಿಗೆ ರಕ್ಷಣೆ ಕೊಡುವ ಕರ್ತವ್ಯ ಸಿಎಂ ಮತ್ತು ಸ್ಪೀಕರ್ ಅವರದ್ದು ಎಂದರು.

ಸದನದ 224 ಮಂದಿ ಶಾಸಕರ ಮೇಲೂ ಕಳಂಕ ಬಂದಿದೆ. ಶಾಸಕರಿಗೆ ರಕ್ಷಣೆ ಕೊಡುವ ಸ್ಥಾನದಲ್ಲಿ ಸ್ಪೀಕರ್ ಕುಳಿತಿದ್ದಾರೆ. ನಮಗೆ ರಕ್ಷಣೆ ಕೊಡಿ ಎಂದು ವಿಪಕ್ಷವಾಗಿ ನಾವು ಸಚಿವರ ಪರವಾಗಿ ಹೋರಾಟ ಮಾಡಿದರೆ ನಮ್ಮನ್ನು ಕತ್ತು ಹಿಡಿದು ಹೊರದಬ್ಬುವ ಕೆಲಸ ಮಾಡಿದ್ದು ಇದು ಖಂಡಿತ ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

ಸಿಎಂ ರಕ್ಷಣೆಯ ಹೊಣೆಗಾರಿಕೆ ವಹಿಸಬೇಕಿತ್ತು. ಅವರು ಸಚಿವರ ರಕ್ಷಣೆಗೆ ಬರಬೇಕಿತ್ತು. ರಕ್ಷಣೆ ವಿಚಾರಕ್ಕೆ ಪ್ರತಿಭಟನೆ ಮಾಡಿದರೆ ನಮ್ಮ ಶಾಸಕರನ್ನು ಎತ್ತಿ ಹಾಕುವ ಕೆಲಸ ಮಾಡಿದ್ದಾರೆ. ದೇಶದ ಮುಂದೆ ಶಾಸಕರ ಗೌರವ ಹರಾಜಾಗುವಂತಾಗಿದೆ. ಅಧಿಕಾರದ ಮದ ಎಲ್ಲಿಗೆ ಬಂದಿದೆ ಎಂದರೆ ಕಾಂಗ್ರೆಸ್ ಪಾಪದ ಕೊಡ ತುಂಬಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದ್ದು, ಇದರ ಪರಿಣಾಮವಾಗಿ ಸಚಿವರು, ಶಾಸಕರನ್ನು ಬೀದಿಗೆ ತರುವ ಕೆಲಸವನ್ನು ಆಡಳಿತ ಪಕ್ಷದವರು ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ರಾಜ್ಯದ ಜನರ ಮುಂದೆ ಮುಖ್ಯಮಂತ್ರಿಗಳ ಬಂಡವಾಳ ಬಯಲಾಗಿದೆ. ಕಾಂಗ್ರೆಸ್ ಪಕ್ಷವು ರಾಜ್ಯದ ಜನರ ಮುಂದೆ ಬೆತ್ತಲಾಗಿದೆ ಎಂದು ತಿಳಿಸಿದರು. ರಾಜ್ಯದ ತೆರಿಗೆ ಹಣವನ್ನು ಒಂದು ಧರ್ಮಕ್ಕೆ ಸೀಮಿತವಾಗಿ ಹಂಚುವುದಾದರೆ ಇದನ್ನು ನೋಡಿಕೊಂಡು ಸುಮ್ಮನೆ ಕೂರಬೇಕೇ ಎಂದು ಕೇಳಿದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News