ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ; ಬಹುತೇಕ ಕಡೆ ಎಂದಿನಂತೆ ಜನಜೀವನ

Update: 2025-03-22 20:01 IST
ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ; ಬಹುತೇಕ ಕಡೆ ಎಂದಿನಂತೆ ಜನಜೀವನ
  • whatsapp icon

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ(ಕೆಎಸ್ಸಾರ್ಟಿಸಿ) ನಿರ್ವಾಹಕರೊಬ್ಬರ ಮೇಲೆ ಮರಾಠಿಗರು ನಡೆಸಿದ ಹಲ್ಲೆಯನ್ನು ಖಂಡಿಸಿ ಹಾಗೂ ಎಂಇಎಸ್ ನಿμÉೀಧಿಸಬೇಕೆಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ ‘ಕರ್ನಾಟಕ ಬಂದ್’ಗೆ ನೀರಸ ಪ್ರಕ್ರಿಯೆ ವ್ಯಕ್ತವಾಗಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿಯೂ ಎಂದಿನಂತೆ ವಾಹನ ಸಂಚಾರ, ಜನಜೀವನ ಸಹ ಸ್ಥಿತಿಯಲ್ಲಿತ್ತು.

ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಶನಿವಾರ ಬೆಳಗ್ಗೆ 6 ಗಂಟೆಯಿಂದಲೇ ರಸ್ತೆಗಿಳಿದ ಕನ್ನಡ ಪರ ಸಂಘ, ಸಂಸ್ಥೆಗಳ ಮುಖ್ಯಸ್ಥರು ಕಾರ್ಯಕರ್ತರು, ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದೆಂದು ಮಾಲಕರನ್ನು ಕೋರಿದರು. ಈ ವೇಳೆ ಹೊತ್ತು ಮಾತ್ರ ಬಾಗಿಲು ಜಡಿಯಲಾಗಿದ್ದರೂ, ಎಂದಿನಂತೆ ವ್ಯಾಪಾರ ವಾಹಿವಾಟು ಜರುಗಿತು.

ಅದೇ ರೀತಿ, ಬೆಂಗಳೂರಿನ ಕೆಆರ್ ಮಾರುಕಟ್ಟೆ, ಮೆಜೆಸ್ಟಿಕ್, ಜೆಸಿ ರಸ್ತೆ, ಅವೆನ್ಯೂ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಮಲ್ಲೇಶ್ವರಂ, ಸ್ಯಾಟಲೈಟ್ ಬಸ್ ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳು ಎಂದಿನಂತೆ ಜನರ ದಟ್ಟಣೆಯಿಂದ ಕೂಡಿದ್ದವು. ಪೆಟ್ರೋಲ್ ಬಂಕ್, ಮೆಡಿಕಲ್ ಶಾಪ್‍ಗಳು, ಆಸ್ಪತ್ರೆಗಳು ಹಣ್ಣು ತರಕಾರಿ ಅಂಗಡಿ, ಬೇಕರಿಗಳು ಎಂದಿನಂತೆ ವ್ಯಾಪಾರವನ್ನು ಕೈಗೊಂಡಿದ್ದರು.

ಮತ್ತೊಂದೆಡೆ, ಆಟೇ, ಟ್ಯಾಕ್ಸಿಗಳು ಕೆಲ ಹೊತ್ತು ಪ್ರತಿಭಟನೆ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಜನ ಮೆಟ್ರೋದತ್ತ ಮುಖ ಮಾಡಿದ್ದರು. ಬೆಳಗ್ಗೆಯಿಂದ ಮೆಟ್ರೋ ರೈಲು ಸಂಚಾರ ಹೆಚ್ಚಾಗಿತ್ತು. ಐಟಿ-ಬಿಟಿ ಉದ್ಯೋಗಿಗಳು, ವಿವಿಧ ವಲಯಗಳ ನೌಕರರು ಟ್ಯಾಕ್ಸಿಗಳಿಲ್ಲದ ಪರಿಣಾಮ ಮೆಟ್ರೋದಲ್ಲಿ ಪ್ರಯಾಣಿಸಿದರು. ಬೆಂಗಳೂರು ಬಂದ್ ಗೆ ಕನ್ನಡ ಚಿತ್ರೋದ್ಯಮ ಸಂಪೂರ್ಣ ಬೆಂಬಲ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ಚಿತ್ರ ಮಂದಿರಗಳಲ್ಲಿ ಬೆಳಗಿನ ಪ್ರದರ್ಶನ ಸ್ಥಗಿತ ಮಾಡಲಾಗಿತ್ತು.

ಬೆಳಗಾವಿಯಲ್ಲಿಯೇ ನೀರಸ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕರ್ನಾಟಕ ಬಂದ್ ಪ್ರತಿಭಟನೆಗೆ ಸೀಮಿತವಾಯಿತು. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ರಾಣಿ ಚನ್ನಮ್ಮ ವೃತ್ತದವರೆಗೂ ಕನ್ನಡ ಪರ ಹೋರಾಟಗಾರರು ಪಾದಯಾತ್ರೆ ನಡೆಸಿದರು. ಈ ವೇಳೆ ರಸ್ತೆಯಲ್ಲಿ ಹೊರಳಾಡಿ ಎಂಇಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎಂದಿನಂತೆ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅಂಗಡಿಗಳನ್ನು ಬಂದ್ ಮಾಡಿಸಲು ಪ್ರತಿಭಟನಾಕಾರರು ಮಾರುಕಟ್ಟೆಯತ್ತ ಹೊರಡಲು ಯತ್ನಿಸಿದರು. ಅವರನ್ನು ಪೆÇಲೀಸರು ತಡೆದರು. ಈ ವೇಳೆ ವಾಗ್ವಾದ ಉಂಟಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು.

ಬೆಳಗಾವಿಯಲ್ಲಿ ಜನ ಮತ್ತು ವಾಹನಗಳ ಓಡಾಟ ಕಂಡು ಬಂದಿತು. ಅಂಗಡಿ, ಮುಂಗಟ್ಟುಗಳು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದವು. ಹೋಟೆಲ್‍ಗಳು ತೆರೆದಿದ್ದವು. ಬಂದ್ ಬಿಸಿ ನಗರದಲ್ಲಿ ಯಾವುದೇ ರೀತಿ ತಟ್ಟಲಿಲ್ಲ. ಸಾರಿಗೆ ಬಸ್, ಆಟೋ ಸೇರಿ ಖಾಸಗಿ ವಾಹನಗಳು ಓಡಾಡಿದವು.

ಇನ್ನೊಂದೆಡೆ, ಮಹಾರಾಷ್ಟ್ರದಿಂದ ನಿತ್ಯ ಬೆಳಗಾವಿಗೆ 90 ಬಸ್‍ಗಳು ಆಗಮಿಸುತ್ತಿದ್ದವು. ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಮಹಾರಾಷ್ಟ್ರ ಸರಕಾರ ತಮ್ಮ ಬಸ್‍ಗಳನ್ನು ವಾಪಸ್ಸು ಕರೆಸಿಕೊಂಡಿವೆ. ಎರಡೂ ರಾಜ್ಯಗಳ ಗಡಿವರೆಗೆ ಮಾತ್ರ ಬಸ್‍ಗಳು ಸಂಚಾರ ಮಾಡುತ್ತಿವೆ.

ಕರವೇಯ ಉತ್ತರ ಕರ್ನಾಟಕ ಅಧ್ಯಕ್ಷ ಮಹಾಂತೇಶ ರಣಗಟ್ಟಿಮಠ ಮಾತನಾಡಿ, ರಾಜ್ಯ ಸರಕಾರ ಕರ್ನಾಟಕ ಬಂದ್ ಹತ್ತಿಕ್ಕಲು ಯತ್ನಿಸುತ್ತಿದೆ. ಹಾಗಾಗಿ, ಇದು ಕನ್ನಡ ವಿರೋಧಿ ಸರ್ಕಾರ. ಮುಂದಿನ ದಿನಗಳಲ್ಲಿ ಈ ಸರಕಾರಕ್ಕೆ ಕನ್ನಡಿಗರು ತಕ್ಕ ಪಾಠ ಕಲಿಸಲಿದ್ದಾರೆ. ಬೆಳಗಾವಿ ಜನಪ್ರತಿನಿಧಿಗಳು ಮರಾಠಿಗರ ಮತಗಳಿಗೋಸ್ಕರ ಅವರಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಇದನ್ನು ಬಿಟ್ಟು ಕನ್ನಡಿಗರ ಹಿತ ಕಾಯುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಮಹಾರಾಷ್ಟ್ರಕ್ಕೆ ಬಸ್ ಬಂದ್:

‘ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಹೋಗುವ ಬಸ್ ಹಾಗೂ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರಬೇಕಿದ್ದ ಬಸ್‍ಗಳ ಸಂಚಾರ ಬಂದ್ ಆಗಿತ್ತು. ಇನ್ನುಳಿದಂತೆ ಬೆಳಗಾವಿ ನಗರ, ಜಿಲ್ಲೆ ಸೇರಿ ರಾಜ್ಯದ ವಿವಿಧೆಡೆ ಎಂದಿನಂತೆ ಬಸ್‍ಗಳು ಕಾರ್ಯಾಚರಣೆ ಮಾಡುತ್ತಿವೆ. ಮಹಾರಾಷ್ಟ್ರದ ಪುಣೆ, ಥಾಣೆ, ಮುಂಬೈ, ಮೀರಜ್, ಸಾಂಗ್ಲಿಯಿಂದ ಬಸ್ ಸೇವೆ ಸಂಪೂರ್ಣ ಸ್ಥಗಿತವಾಗಿದ್ದವು.

ಆರಂಭಕ್ಕೂ ಮುನ್ನಾ ವಶಕ್ಕೆ:

ಕನ್ನಡಿಗರ ಮೇಲೆ ಎಂಇಎಸ್ ದರ್ಪ, ದೌರ್ಜನ್ಯ ಖಂಡಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಹಿನ್ನೆಲೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾಗಿದ್ದ ಕನ್ನಡ ಪರ ಹೋರಾಟಗಾರರನ್ನು ಪೊಲೀಸರು ಆರಂಭದಲ್ಲಿಯೇ ವಶಕ್ಕೆ ಪಡೆದರು.

ಶನಿವಾರ ಬೆಂಗಳೂರಿನ ಪುರಭವನ ಮುಂಭಾಗ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಜಮಾಯಿಸಿದ್ದ ಹೋರಾಟಗಾರರನ್ನು ವಶಕ್ಕೆ ಪಡೆದರು. ವಾಟಾಳ್ ನಾಗರಾಜ್ ಕಾರಿನಿಂದ ಇಳಿಯುತ್ತಿದ್ದಂತೆಯೇ ವಶಕ್ಕೆ ಪಡೆದು ಮಾತನಾಡಲು ಅವಕಾಶ ನೀಡದೇ ಬಸ್‍ನಲ್ಲಿಯೇ ಇರಿಸಿದ ದೃಶ್ಯ ಕಂಡಿತು.

ಇನ್ನೂ, ಎಂಇಎಸ್ ಕಾರ್ಯಕರ್ತರು ಬೆಳಗಾವಿಯಲ್ಲಿ ಉದ್ದಟತನದಿಂದ ವರ್ತಿಸುತ್ತಿದ್ದಾರೆ. ಇಂತಹ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಯಾವೊಬ್ಬ ರಾಜಕೀಯ ನಾಯಕರು ಕೂಡ ಮರಾಠಿಗರ ಈ ವರ್ತನೆಯನ್ನು ಖಂಡಿಸುತ್ತಿಲ್ಲ. ರಾಜಕಾರಣಿಗಳಿಗೆ ಕನ್ನಡಿಗರ ಹಿತಕ್ಕಿಂತ ಮರಾಠಿಗರ ಮತ ಮುಖ್ಯವಾಗಿದೆ ಎಂದು ಕನ್ನಡ ಪರ ಹೋರಾಟಗಾರರು ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಂದ್ ಯಶಸ್ವಿಯಾಗಿದೆ: ವಾಟಾಳ್ ನಾಗರಾಜ್

ಎಂಇಎಸ್ ರಾಜ್ಯದಲ್ಲಿ ನಿಷೇಧಿಸಬೇಕು. ಮಹಾದಾಯಿ ಯೋಜನೆ ಜಾರಿ, ಕನ್ನಡಿಗರ ಹಿತರಕ್ಷಣೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಇಂದಿನ ಕರ್ನಾಟಕ ಬಂದ್ ಯಶಸ್ವಿಯಾಗಿದೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಶನಿವಾರ ಟೌನ್ ಹಾಲ್ ಬಳಿ ಪ್ರತಿಭಟನಾ ಮೆರವಣಿಗೆಗೆ ಮುಂದಾದ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಸೇರಿದಂತೆ ಕನ್ನಡಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು.

ಈ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರಕಾರ ಪೊಲೀಸರ ಮೂಲಕ ಬಂದ್ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಪೆÇಲೀಸ್ ರಾಜ್ಯ, ಪೆÇಲೀಸ್ ಗೂಂಡಾಗಿರಿ ನಡೆಯುತ್ತಿದೆ. ಆದರೆ ರಾಜ್ಯಾದ್ಯಂತ ಬಂದ್ ಯಶಸ್ವಿಯಾಗಿದೆ ಎಂದು ಹೇಳಿದರು.

ಮಂಡ್ಯದಲ್ಲಿ ಬಂದ್ ಬಿಸಿ:

ಮಂಡ್ಯದಲ್ಲಿ ಬಂದ್ ಬೆಂಬಲಿಸಿ ಕನ್ನಡಪರ ಹೋರಾಟಗಾರರು ಬೀದಿಗಿಳಿದು ಹೋರಾಟ ನಡೆಸಿದರು. ಬೆಳಗ್ಗೆಯಿಂದಲೇ ಅಂಗಡಿ, ಮುಂಗ್ಗಟ್ಟುಗಳನ್ನು ಮುಚ್ಚಿ ಬಂದ್‍ಗೆ ಬೆಂಬಲ ವ್ಯಕ್ತಪಡಿಸಲಾಯಿತು. ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಮಂಡ್ಯದ ಸಂಜಯ್ ವೃತ್ತದಲ್ಲಿ ಕನ್ನಡಪರ ಸಂಘಟನೆಗಳು ತಲೆ ಮೇಲೆ ಹುಲ್ಲು ಹೊತ್ತು ಪ್ರತಿಭಟನೆ ನಡೆಸಿದರು. ಕನ್ನಡ ಸೇನೆಯ ಕಾರ್ಯಕರ್ತರು ಬೃಹತ್ ಬೈಕ್ ರ್ಯಾಲಿ ಮೂಲಕ ಎಂಇಎಸ್ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲೆಲ್ಲಿ ಬಂದ್?:

ಎಂಇಎಸ್ ಪುಂಡಾಟ ಖಂಡಿಸಿ ಕರೆ ನೀಡಿರುವ ಬಂದ್‍ಗೆ ಹಲವು ಜಿಲ್ಲೆಗಳು ಬೆಂಬಲ ನೀಡಿರಲಿಲ್ಲ. ಕರ್ನಾಟಕ ಬಂದ್‍ಗೆ ಮಂಡ್ಯದಲ್ಲಿ ಮಾತ್ರ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಉಳಿದಂತೆ ಬೆಳಗಾವಿ, ಬಾಗಲಕೋಟೆ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಉಡುಪಿ, ಯಾದಗಿರಿ ಜಿಲ್ಲೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಳ್ಳಾರಿ, ಬೀದರ್, ವಿಜಯಪುರ, ಚಿಕ್ಕಬಳ್ಳಾಪುರ, ಚಿಕ್ಕೋಡಿ, ಕಲಬುರಗಿ, ಹಾಸನ, ಹಾವೇರಿ, ಹುಬ್ಬಳ್ಳಿ, ಕಾರವಾರ, ಮಡಿಕೇರಿ, ದಕ್ಷಿಣ ಕನ್ನಡ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ ಹಾಗೂ ಯಾದಗಿರಿ ಜಿಲ್ಲೆಗಳು ಬಂದ್‍ಗೆ ಬೆಂಬಲ ನಿರಾಕರಿಸಿದ್ದವು.

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News