ನಾಳೆ ಕರ್ನಾಟಕ ಬಂದ್ : ಸರಕಾರಿ ರಜೆ ಇಲ್ಲ, ಸಾರಿಗೆ ಇತರೆ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ

ಸಾಂದರ್ಭಿಕ ಚಿತ್ರ
ಬೆಂಗಳೂರು: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಷೇಧ, ಕಳಸಾ ಬಂಡೂರಿ ಮಹದಾಯಿ ಯೋಜನೆ ಆರಂಭ, ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಬೇಕು ಮತ್ತು ಇತ್ತೀಚಿಗೆ ಕೆಎಸ್ಸಾರ್ಟಿಸಿ ನಿರ್ವಾಹಕನ ಮೇಲೆ ಮರಾಠಿಗರ ದಾಳಿ ಸಮಗ್ರ ತನಿಖೆ ಆಗಬೇಕೆಂದು ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಇಂದು(ಮಾ.22) ‘ಅಖಂಡ ಕರ್ನಾಟಕ ಬಂದ್’ಗೆ ಕರೆ ನೀಡಿದ್ದು, ಸಾರಿಗೆ ಸೇರಿದಂತೆ ಹಲವು ಸೇವೆಗಳಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ.
ಸರಕಾರಿ ಕಚೇರಿಗಳು, ಶಾಲಾ ಕಾಲೇಜುಗಳಿಗೆ ರಾಜ್ಯ ಸರಕಾರ ಅಧಿಕೃತ ರಜೆ ಘೋಷಣೆ ಮಾಡಿಲ್ಲ. ಆದ ಕಾರಣ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದರೆ, ಪರಿಸ್ಥಿತಿಗೆ ಅನುಗುಣವಾಗಿ ಶಾಲೆ-ಕಾಲೇಜುಗಳಿಗೆ ರಜೆ ನೀಡಬಹುದು ಎಂದು ಶಿಕ್ಷಣ ಇಲಾಖೆ ಆಯಾ ಜಿಲ್ಲಾಧಿಕಾರಿಗಳಿಗೆ ಮೌಖಿಕವಾಗಿ ಸೂಚನೆ ನೀಡಿದೆ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯ ವ್ಯಾಪ್ತಿ ಶನಿವಾರ(ಮಾ.22) ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರ್ನಾಟಕದಾದ್ಯಂತ ಬಂದ್ ಕರೆ ನೀಡಲಾಗಿದೆ. ಬಂದ್‍ಗೆ ಕೆಎಸ್ಸಾರ್ಟಿಸಿ ನೌಕರರ ಸಂಘಟನೆಗಳು ಬೆಂಬಲ ನೀಡಿರುವ ಹಿನ್ನೆಲೆ ಬಸ್‍ಗಳ ಸಂಚಾರ ವಿರಳ ಎಂದು ಹೇಳಲಾಗುತ್ತಿದೆ. ಓಲಾ-ಊಬರ್, ಆಟೊ ಸೇವೆಯೂ ತಗ್ಗಬಹುದು. ಜತೆಗೆ, ಚಿತ್ರಮಂದಿರದ ಪ್ರದರ್ಶನವನ್ನು ಮಧ್ಯಾಹ್ನದವರೆಗೆ ನಿಲ್ಲಿಸಿ ಬೆಂಬಲ ಸೂಚಿಸಲಾಗಿದೆ.
ಬಂದ್‍ಗೆ ಓಲಾ, ಊಬರ್ ಚಾಲಕರ ಸಂಘ, ಶಿವರಾಮೇಗೌಡ ಬಣ, ಕರವೇ ಗಜಕೇಸರಿ ಸೇನೆ, ಡಾ.ರಾಜ್ ಕುಮಾರ್ ಅಭಿಮಾನಿ ಸಂಘ, ವೀರ ಕನ್ನಡಿಗರ ಸೇನೆ, ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು, ಬೆಂಗಳೂರು ಆಟೊ ಸೇನೆ, ಜಯಭಾರತ್ ಚಾಲಕರ ಸಂಘ, ಕರ್ನಾಟಕ ಜನಪರ ವೇದಿಕೆ, ಆದರ್ಶ ಆಟೊ ಯೂನಿಯನ್, ಗೂಡ್ಸ್ ಚಾಲಕರ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಬೆಂಬಲ ನೀಡಿವೆ.
ಬಂದ್ ಕುರಿತು ಶುಕ್ರವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಕರ್ನಾಟಕ ಬಂದ್ ಅನ್ನು ರಾಜ್ಯದ ಎಲ್ಲ ಜನತೆಯೂ ಯಶಸ್ವಿಗೊಳಿಸಬೇಕು. ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಬೆಳಗಾವಿ ನಮ್ಮದು. ಮರಾಠ ಪುಂಡರ, ಎಂಇಎಸ್ ಗೂಂಡಾಗಳ ವಿರುದ್ಧ ನಮ್ಮ ಹೋರಾಟ. ಕೂಡಲೇ ಸರಕಾರ ಎಂಇಎಸ್ ಅನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕವನ್ನು ಸಮಗ್ರ ಅಭಿವೃದ್ಧಿ ಮಾಡಬೇಕು. ರಾಜ್ಯದ ಗಡಿನಾಡುಗಳ ಬೆಳವಣಿಗೆ ಮಾಡಬೇಕು. ಬೆಳಗಾವಿ ಉಳಿಸಬೇಕು, ಎಂಇಎಸ್ ನಿಷೇಧ ಮಾಡಬೇಕು. ಶಿವಸೇನೆ ಹಾಗೂ ಎಂಇಎಸ್ ಪುಂಡರನ್ನು ಗಡಿಪಾರು ಮಾಡಬೇಕು ಎಂದ ಅವರು, ಸಾಂಬಾಜಿ ಪ್ರತಿಮೆ ತೆಗೆಯಬೇಕು, ಕೆಎಸ್ಸಾರ್ಟಿಸಿ ನಿರ್ವಾಹಕನ ಮೇಲೆ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.
ಮೇಕೆದಾಟು ಯೋಜನೆ ಆಗಲೇಬೇಕು, ಕೊಪ್ಪಳ ಸುತ್ತ ಯಾವ ಕಾರ್ಖಾನೆಗಳು ಬೇಡ, ಕರ್ನಾಟಕದಲ್ಲಿ ಪರಭಾಷಾ ದಬ್ಬಾಳಿಕೆ ನಿಲ್ಲಬೇಕು ಮತ್ತು ಪರಭಾಷಾ ಚಿತ್ರಗಳ ಬಹಿಷ್ಕಾರ ಮಾಡಬೇಕು. ಮಹಾರಾಷ್ಟ್ರದಲ್ಲಿ ಕನ್ನಡ ಮಹಾಮಹಿಮರ ಪ್ರತಿಮೆಗಳು ಸ್ಥಾಪನೆಯಾಗಬೇಕು. ಮಂಗಳೂರು-ಕಾರವಾರ ಬಂದರು ಅಭಿವೃದ್ಧಿ ಮಾಡಬೇಕು. ಬೆಂಗಳೂರು ನಗರದಲ್ಲಿ ಅನಧಿಕೃತವಾಗಿ ಕಂಪೆನಿಗಳು ಬಂದು ಬೈಕ್ ಆಟೋಗಳಿಗೆ, ಕಾರ್ ಗಳಿಗೆ ಹೊರ ರಾಜ್ಯದ ಚಾಲಕರನ್ನು ಗುತ್ತಿಗೆ ಆಧಾರದಲ್ಲಿ ಕರೆತಂದಿರುವುದರಿಂದ ನಮ್ಮ ಚಾಲಕರಿಗೆ ಅನ್ಯಾಯವಾಗುತ್ತಿದೆ. ಮೆಟ್ರೋ ದರ ಇಳಿಕೆ ಮಾಡಬೇಕು ಮತ್ತು ಮೆಟ್ರೋದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು ಎಂದು ಅವರು ಆಗ್ರಹಿಸಿದರು.
ಹಾನಿಯಾದರೆ ಸಂಘಟನೆಗಳೇ ಹೊಣೆ: ‘ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಅಗತ್ಯ ಪೂರ್ವಸಿದ್ಧತೆಗಳನ್ನ ಪೊಲೀಸ್ ಇಲಾಖೆ ಮಾಡಿಕೊಂಡಿದ್ದು, ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಲು ಮುಂದಾದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಬಂದ್‍ಗೆ ಬೆಂಬಲ ಸೂಚಿಸಿರುವ ಸಂಘಟನೆಗಳ ಮುಖಂಡರನ್ನು ಕರೆಸಿ ಮಾತನಾಡಲಾಗಿದ್ದು, ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಗಳಾದರೆ ಸಂಘಟನೆಗಳೇ ಜವಾಬ್ದಾರಿಯಾಗಲಿವೆ’
-ಬಿ.ದಯಾನಂದ್ ನಗರ ಪೊಲೀಸ್ ಆಯುಕ್ತ
ಶಾಲಾ ಕಾಲೇಜು ರಜೆ ಇಲ್ಲ: ‘ಬಂದ್‍ನ ಬಗ್ಗೆ ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟವು ನೈತಿಕ ಬೆಂಬಲ ನೀಡಿದೆ. ಆದರೆ, ಶಾಲೆಗಳು ಎಂದಿನಂತೆ ನಡೆಯಲಿವೆ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹೇಳಿದ್ದಾರೆ.
ಸರಕಾರಿ ಕಚೇರಿಗಳು ರಜೆ ಇಲ್ಲ: ‘ಮಾ.22ನಾಲ್ಕನೆ ಶನಿವಾರ ಆಗಿರುವ ಹಿನ್ನೆಲೆ ಸರಕಾರಿ ಕಚೇರಿಗಳು ರಜೆ ಇರಲಿವೆ. ಉಳಿದಂತೆ ಸೇವಾ ವಲಯದ ಸರಕಾರಿ ಕಚೇರಿಗಳು ಕಾರ್ಯ ನಿರ್ವಹಿಸಲಿವೆ. ಅದೇ ರೀತಿ, ಬ್ಯಾಂಕ್‍ಗಳು ಕೂಡ ನಾಲ್ಕನೆ ಶನಿವಾರ ಹಿನ್ನೆಲೆ ರಜೆ ಇರಲಿವೆ.
ಈ ಸೇವೆಗಳು ಲಭ್ಯ?:
ನಮ್ಮ ಮೆಟ್ರೋ,ಬಿಎಂಟಿಸಿ ಬಸ್ ಸೇವೆ, ಕೆಎಸ್ಸಾರ್ಟಿಸಿ ಬಸ್ ಸೇವೆ, ಶಾಲಾ ಕಾಲೇಜುಗಳು,
ಮಾರುಕಟ್ಟೆಗಳು,ಆಸ್ಪತ್ರೆ, ವೈದ್ಯಕೀಯ ಸೇವೆಗಳು,ಉಪಹಾರ ಮಂದಿರ, ಹೋಟೆಲ್‍ಗಳು
ಬಾರ್, ರೆಸ್ಟೋರೆಂಟ್, ಪಬ್‍ಗಳು
ಈ ಸೇವೆಗಳು ಅಲಭ್ಯ?
ಓಲಾ-ಊಬರ್, ಆಟೋ ಸೇವೆ ವ್ಯತ್ಯಯ ಸಾಧ್ಯತೆ. ಜತೆಗೆ, ಸಿನಿಮಾ ಮಂದಿರಗಳು ಬೆಳಗಿನ ಶೋ ಇರಲ್ಲ ಎಂದು ಪ್ರಕಟಿಸಿವೆ.
ಕರವೇ ಬೆಂಬಲವಿಲ್ಲ: ‘ನಿರ್ವಾಹಕನ ಮೇಲೆ ಹಲ್ಲೆನಡೆದಾಗ ಬೆಳಗಾವಿಗೆ ಹೋಗಿ ದೊಡ್ಡ ಸ್ವರೂಪದ ಚಳವಳಿ ನಡೆಸಲಾಗಿತ್ತು. ಸುಳ್ಳು ಪೋಕ್ಸೊ ಪ್ರಕರಣ ಹಿಂಡೆಯುವಂತೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿದ್ದ ಇನ್‍ಸ್ಪೆಕ್ಟರ್ ನ್ನು ವರ್ಗಾವಣೆ ಮಾಡಿದ್ದು, ಕನ್ನಡಿಗರ ಮೇಲೆ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳುವುದಾಗಿ ಪೊಲೀಸ್ ಕಮಿಷನರ್ ಭರವಸೆ ನೀಡಿದ್ದಾರೆ. ಹೀಗಿರುವಾಗ ಬಂದ್‍ನ ಅಗತ್ಯವಿಲ್ಲ’
-ಟಿ.ಎ.ನಾರಾಯಣಗೌಡ ಕರವೇ ರಾಜ್ಯಾಧ್ಯಕ್ಷ