ಶರಾವತಿ ಸಂತ್ರಸ್ತರಿಗೆ ಪರಿಹಾರ ಒದಗಿಸಲು ‘ಸೆಟ್ಲ್ ಮೆಂಟ್ ಆಫೀಸರ್’ ನೇಮಕ: ಕಂದಾಯ ಸಚಿವ ಕೃಷ್ಣ ಬೈರೇಗೌಡ

Update: 2023-09-06 15:38 GMT

ಶಿವಮೊಗ್ಗ(ಸೆ.06):ಶರಾವತಿ ಸಂತ್ರಸ್ತರಿಗೆ ಪರಿಹಾರ ಒದಗಿಸಲು ತಜ್ಞರ ಸಮಿತಿ ರಚಿಸಿ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿದೆ. ಸರ್ಕಾರದಿಂದ ಈ ಕುರಿತು ಸೆಟ್ಲ್‍ಮೆಂಟ್ ಮಾಡಲು ‘ಸೆಟ್ಲ್‍ಮೆಂಟ್ ಆಫೀಸರ್’ ನೇಮಕ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗದ್ದ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿವಮೊಗ್ಗದಲ್ಲಿ ಭೂಮಿ ಮಂಜೂರಾತಿ ವಿಷಯದಲ್ಲಿ ಹೆಚ್ಚಿನ ಸಮಸ್ಯೆಗಳಿವೆ. ಜಿಲ್ಲಾಧಿಕಾರಿಗಳು ಶರಾವತಿ ಸಂತ್ರಸ್ತರು, ಹಾಗೂ ಇತರೆ ಭೂಮಿ ಮಂಜೂರಾತಿ ಕುರಿತು ನನ್ನ ಗಮನಕ್ಕೆ ತಂದಿದ್ದಾರೆ. ಅರಣ್ಯ ಮತ್ತು ಕಂದಾಯ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಿ ಇದನ್ನು ಬಗೆಹರಿಸಲು ಕ್ರಮ ವಹಿಸಲಾಗುವುದು ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಶೇ.50 ಕಂದಾಯ ಭೂಮಿ ಇದ್ದರೆ, ಶೇ.50 ಅರಣ್ಯ ಭೂಮಿ ಈ ರೀತಿ ಸಮಸ್ಯೆಗಳಿವೆ. ಭೂಮಿ ಸರ್ವೇ ಕಾರ್ಯ ತ್ವರಿತವಾಗಿ ಆಗಬೇಕಿದೆ.ಅದಕ್ಕೆ ಲೈಸನ್ಸ್ಡ್ ಸರ್ವೇಯರ್ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದು, ಭೂಮಾಪನ ಇಲಾಖೆ ಆಯುಕ್ತರು ಅಕ್ಕಪಕ್ಕದ ಜಿಲ್ಲೆಯ ಸರ್ವೇಯರ್ ಅಥವಾ ನೇಮಕಾತಿ ಹೊಂದಿದ ಸರ್ವೇಯರ್ ಗಳನ್ನು ನಿಯೋಜಿಸುವಂತೆ ಹಾಗೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೂಚನೆ ನೀಡಿದರು.

2019 ರಿಂದ 2022 ರವರೆಗೆ ನೆರೆಸಂತ್ರಸ್ಥರ ಪುನರ್ವಸತಿ ಯೋಜನೆಯಡಿ ಶುರು ಮಾಡದೇ ಇರುವ ಮನೆಗಳ ಕುರಿತು ತಹಶೀಲ್ದಾರ್ ಪರಿಶೀಲಿಸಿ, ನೋಟಿಸ್ ನೀಡಿ ಪ್ರಕರಣ ಇತ್ಯರ್ಥಪಡಿಸಬೇಕು. ಹಾಗೂ ಬಾಕಿ ಉಳಿಸಿರುವ ಶಾಲೆ-ಅಂಗನವಾಡಿ ಸಣ್ಣಪುಟ್ಟ ಕೆಲಸಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಸಂಬಂಧಿಸಿದ ಅಧಿಕಾರಿಗೆ ತಾಕೀತು ಮಾಡಿದರು.

ಜಿಲ್ಲೆಯಲ್ಲಿ 97 ಸಾವಿರ ಫಾರ್ಮ್ 57 ಅರ್ಜಿಗಳು ಬಂದಿವೆ. ಇವುಗಳನ್ನು ಇತ್ಯರ್ಥಪಡಿಸಲು ಸಮಿತಿ ರಚನೆ ಮಾಡಲಾಗುವುದು. ಸಮಿತಿಯು ನಿಜವಾದ ಬಡ ಸಾಗುವಳಿದಾರರನ್ನು ಗುರುತಿಸಿ ಅವರ ಜಮೀನಿಗೆ ತ್ವರಿತವಾಗಿ ಹಕ್ಕುಪತ್ರ ನೀಡುವ ಕೆಲಸ ಆಗಬೇಕು. ರೈತರ ಹೆಸರಿನಲ್ಲಿ ಬೇರೆಯವರು ಭೂಮಿ ಕಬಳಿಸುವಂತಾಗಬಾರದು. ಕಡೂರು ತಾಲ್ಲೂಕಿನಲ್ಲಿ ಅನರ್ಹರಿಗೆ ಸಾವಿರಾರು ಎಕರೆ ಜಮೀನು ಮಂಜೂರು ಮಾಡಿದ ಅಧಿಕಾರಿಗಳ ವಿರುದ್ದ ಶಿಸ್ತಿನ ಕ್ರಮ ವಹಿಸಲಾಗಿದೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಅಧಿಕಾರಿಗಳು ಕೆಲಸ ಮಾಡಬೇಕು. ಅರ್ಹರಿಗೆ ಅನುಕೂಲ ಮಾಡಿಕೊಡಬೇಕೆಂದು ಸೂಚಿಸಿದರು.

ಫಾರಂ 57 ವಿಲೇ ಮಾಡಲು ತಹಶೀಲ್ದಾರರಿಗೆ ಹೊಸ ಆ್ಯಪ್ ನೀಡಲಾಗುವುದು. ಇದರಲ್ಲಿ ಡಾಟಾ ಅಪ್‍ಲೋಡ್ ಮಾಡಿದಾಗ ಅದು ಸರ್ಕಾರಿ ಅಥವಾ ಅರಣ್ಯ ಭೂಮಿ ಎಂದು ಗೊತ್ತಾಗುತ್ತದೆ. 15 ವರ್ಷದ ಸ್ಯಾಟಲೈಟ್ ಇಮೇಜ್ ಸಿಗಲಿದೆ. ಗ್ರಾಮ ಲೆಕ್ಕಿಗರು ಪ್ರತಿ ಮೂರು ತಿಂಗಳಿಗೆ ಕ್ಷೇತ್ರ ಭೇಟಿ ನೀಡಿ ಒತ್ತುವರಿ ಬಗ್ಗೆ ಪರಿವೀಕ್ಷಿಸಿ ವರದಿ ನೀಡಬೇಕು ಎಂದ ಅವರು ನಿಜವಾದ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ಮತ್ತು ಸರ್ಕಾರಿ ಜಾಗವನ್ನು ಭದ್ರಪಡಿಸುವ ಕೆಲಸವನ್ನು ಕಂದಾಯ ಇಲಾಖೆ ಅಧಿಕಾರಿಗಳು,ಸಿಬ್ಬಂದಿಗಳು ಮಾಡಬೇಕು ಎಂದರು.

ಮಾರುಕಟ್ಟೆ ಬೆಲೆ ಪರಿಷ್ಕರಣೆ:

ನೋಂದಣಿ ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಮಾತನಾಡಿದ ಸಚಿವರು, ಇಲಾಖೆಯಲ್ಲಿ ಸುಮಾರು ಐದು ವರ್ಷಗಳಿಂದ ಮಾರುಕಟ್ಟೆ ಬೆಲೆ ಪರಿಷ್ಕರಣೆಯಾಗಿರಲಿಲ್ಲ. ಗೈಡ್ ಲೈನ್ಸ್ ದರ ಮತ್ತು ಮಾರುಕಟ್ಟೆ ದರಕ್ಕೆ ಸುಮಾರು ನಾಲ್ಕು ಪಟ್ಟು ವ್ಯತ್ಯಾಸವಿದೆ. ಗೈಡ್ ಲೈನ್ಸ್ ದರಕ್ಕಿಂತ ಮಾರುಕಟ್ಟೆ ದರ 3 ರಿಂದ 4 ನಾಲ್ಕು ಹೆಚ್ಚಿದೆ. ಈ ತಾರತಮ್ಯ ಸರಿಪರಿಸುವ ಪ್ರಕ್ರಿಯೆ ನಡೆಯುತ್ತಿದೆ. ಮಾರುಕಟ್ಟೆ ದರವನ್ನು ಪರಿಷ್ಕರಿಸಲಾಗಿದ್ದು, ಆಕ್ಷೇಪಣೆಗಳಿಗೆ ಆಹ್ವಾನ ನೀಡಲಾಗಿದೆ. ಈ ಕುರಿತು ಆಕ್ಷೇಪಣೆಗಳನ್ನು ಜನರು ಸಲ್ಲಿಸಬಹುದು. ನೋಂದಣಿ ಕಚೇರಿಯಲ್ಲಿ ಸರ್ವರ್ ಅಲ್ಲ ಬದಲಾಗಿ ನೆಟ್‍ವರ್ಕ್ ಸಮಸ್ಯೆ ಇದೆ. ಈ ಸಮಸ್ಯೆ ಬಗೆಹರಿಸುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಸಬ್‍ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರ, ಈ ಕಚೇರಿಗೆ ಸಿಎ ನಿವೇಶನ ಮಂಜೂರಾತಿ, ತಹಶೀಲ್ದಾರ್ ಕಛೇರಿ ಮೂಲಸೌಕರ್ಯ ಅಭಿವೃದ್ದಿ, ಹಕ್ಕುಪತ್ರ ವಿತರಣೆ, ರುದ್ರಭೂಮಿಗೆ ಜಾಗ, ಗೋಶಾಲೆ ನಿರ್ಮಾಣದ ಕುರಿತು ಮನವಿ ಸಲ್ಲಿಸಿದರು.

ಸಭೆಯಲ್ಲಿ ಸಚಿವರು ಗ್ರಾಮ ಲೆಕ್ಕಿಗರು, ಆರ್‍ಐ ಸೇರಿದಂತೆ ಅಧಿಕಾರಿ/ಸಿಬ್ಬಂದಿ ವರ್ಗದಿಂದ ಮುಕ್ತವಾಗಿ ಸಲಹೆಗಳನ್ನು ಮತ್ತು ಮನವಿಗಳನ್ನು ಸ್ವೀಕರಿಸಿದರು.

ಸಭೆಯಲ್ಲಿ ಶಾಸಕಿ ಶಾರದಾ ಪೂರ್ಯಾನಾಯ್ಕ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ, ಕಂದಾಯ ಇಲಾಖೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ಭೂಮಾಪನ ಇಲಾಖೆ ಆಯುಕ್ತರಾದ ಜೆ.ಮಂಜುನಾಥ್, ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ ವಸಂತಕುಮಾರ್, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News