ವಿಧಾನಸಭೆಯಲ್ಲಿ ಬಜೆಟ್‍ಗೆ ಅನುಮೋದನೆ; ವಿಪಕ್ಷಗಳ ಗೈರು ಹಾಜರಿಯಲ್ಲಿ ಸದನಕ್ಕೆ ಸಿಎಂ ಉತ್ತರ

Update: 2023-07-20 15:26 GMT

ಬೆಂಗಳೂರು, ಜು.20: ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ಅನುಪಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 2023-24ನೆ ಸಾಲಿನ ಬಜೆಟ್ ಮೇಲೆ ನಡೆದಂತಹ ಚರ್ಚೆಗೆ ಗುರುವಾರ ವಿಧಾನಸಭೆಯಲ್ಲಿ ಸರಕಾರದ ಪರವಾಗಿ ಉತ್ತರಿಸಿದ್ದು ವಿಶೇಷವಾಗಿತ್ತು.

ನಾನು 14 ಬಜೆಟ್‍ಗಳನ್ನು ಮಂಡಿಸಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ವಿರೋಧ ಪಕ್ಷದ ಸದಸ್ಯರು ಇಲ್ಲದೆ ಇರುವ ಸಂದರ್ಭದಲ್ಲಿ ಉತ್ತರ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ದುಃಖಕರ. ರಾಜ್ಯದ ವಿಧಾನಸಭೆಯ ಇತಿಹಾಸದಲ್ಲಿ ರಾಜ್ಯಪಾಲರ ಭಾಷಣ ಹಾಗೂ ಬಜೆಟ್ ಅಧಿವೇಶನ ವಿರೋಧ ಪಕ್ಷದ ನಾಯಕನಿಲ್ಲದೆ ಚರ್ಚೆ ನಡೆದಿರುವುದು ಇದೇ ಮೊದಲು ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯದಲ್ಲಿ ಎರಡು ಬಾರಿ ಅಧಿಕಾರ ನಡೆಸಿದ ಬಿಜೆಪಿಗೆ ಒಬ್ಬ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲದಂತೆ ದಿವಾಳಿಯಾಗಿದೆ. ಬಿಜೆಪಿಗೆ ಪ್ರಜಾಪ್ರಭುತ್ವ, ಸಂವಿಧಾನ, ಸಂಸದೀಯ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಸಂವಿಧಾನದ ಧ್ಯೇಯೋದ್ದೇಶಗಳಿಗೆ ಬಿಜೆಪಿ ತೀಲಾಂಜಲಿ ಇಟ್ಟಿದೆ. ಬಜೆಟ್ ಮೇಲೆ ಚರ್ಚೆ ಮಾಡಿ ಸರಕಾರದ ಗಮನ ಸೆಳೆಯಬಹುದಿತ್ತು. ಆದರೆ, ಪ್ರಚಾರಕ್ಕಾಗಿ ಪ್ರತಿಭಟನೆಗಳನ್ನು ನಡೆಸಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

 

ಕಾಂಗ್ರೆಸ್‍ನ 32, ಬಿಜೆಪಿಯ 20, ಜೆಡಿಎಸ್ ಪಕ್ಷದ 7 ಹಾಗೂ ಮೂವರು ಪಕ್ಷೇತರರು ಸೇರಿದಂತೆ ಒಟ್ಟು 62 ಜನ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ವಿಪಕ್ಷದವರು ತಮ್ಮ ಕರ್ತವ್ಯಕ್ಕಿಂತ ಹೆಚ್ಚಾಗಿ ರಾಜಕೀಯ ಮಾಡುತ್ತಿದ್ದಾರೆ. ಆದುದರಿಂದ, ಜನ ಅವರನ್ನು ತಿರಸ್ಕರಿಸಿ ವಿಪಕ್ಷದಲ್ಲಿ ಕೂರಿಸಿದ್ದಾರೆ. ನಾವು ಕೊಟ್ಟಿರುವ ಐದು ಗ್ಯಾರಂಟಿಗಳಿಂದಾಗಿ ಜನ ಸಂತೋಷವಾಗಿದ್ದಾರೆ. ಆದರೆ, ಇವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎನ್ನುತ್ತಾರೆ. ಆದರೆ, ನಾವು ಬಿಜೆಪಿ ಮುಕ್ತ ರಾಜ್ಯ ಮಾಡುತ್ತೇವೆ ಎಂದು ಹೇಳುವುದಿಲ್ಲ. ಅವರು ಶಾಶ್ವತವಾಗಿ ವಿರೋಧ ಪಕ್ಷದಲ್ಲೆ ಇರಬೇಕು. ಬಿಜೆಪಿಯ ಅವನತಿ ಕರ್ನಾಟಕದಿಂದಲೆ ಆರಂಭವಾಗಿದೆ. ಬಿಜೆಪಿಯವರಿಗೆ ಮೋದಿ ಮೇಲೆ ನಂಬಿಕೆ. ಅವರಿಂದಲೆ ನಾವು ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ದಿನೇ ದಿನೇ ಮೋದಿ ಜನಪ್ರಿಯತೆ ಮಸುಕಾಗುತ್ತಿದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹಾಗೂ ಅದಕ್ಕೆ ಮುನ್ನ ನರೇಂದ್ರ ಮೋದಿ ಸುಮಾರು 28 ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಚುನಾವಣಾ ಪ್ರಚಾರ ಸಭೆಗಳು, ರೋಡ್ ಶೋಗಳನ್ನು ನಡೆಸಿದ್ದಾರೆ. ಮೋದಿ ಪ್ರಚಾರ ನಡೆಸಿದ ಕಡೆಯಲ್ಲ ನಮ್ಮವರು ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಅವರು ತಿಳಿಸಿದರು.

ನಿನ್ನೆ ಸದನದಲ್ಲಿ ಅವರು ಅನಾಗರಿಕರಂತೆ ವರ್ತಿಸಿದರು. ಪೀಠದಲ್ಲಿ ಒಬ್ಬ ದಲಿತ ಸಮುದಾಯದ ಉಪಸಭಾಧ್ಯಕ್ಷ ಕೂತಿದ್ದರು. ಅವರಿಗೆ ಹಾಗೂ ಪೀಠಕ್ಕೆ ಗೌರವ ಕೊಡದೆ ವರ್ತಿಸಿದರು. ಮಾರ್ಷಲ್‍ಗಳು ಅವರ ರಕ್ಷಣೆಗೆ ಮುಂದಾಗದೆ ಇದ್ದಿದ್ದರೆ ಅವರ ಮೇಲೆ ದೈಹಿಕ ಹಲ್ಲೆಯೂ ಆಗಬಹುದಿತ್ತೇನೋ? ರಾಜ್ಯದ ವಿಧಾನಸಭೆ ಇತಿಹಾಸದಲ್ಲಿ ಯಾವತ್ತೂ ಈ ರೀತಿ ಆಗಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಕನಿಷ್ಠ 20 ಸ್ಥಾನಗಳನ್ನು ಗೆಲ್ಲುತ್ತೇವೆ. ದೇಶದ ಸುಮಾರು 26 ಪಕ್ಷಗಳ ನಾಯಕರು ‘ಇಂಡಿಯಾ’ ಎಂಬ ಹೆಸರಿನಲ್ಲಿ ಒಂದಾಗಿದ್ದಾರೆ. ಅದನ್ನು ಸಹಿಸಿಕೊಳ್ಳಲು ಬಿಜೆಪಿಯವರಿಗೆ ಆಗುತ್ತಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಬಜೆಟ್‍ಗೆ ಅನುಮೋದನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2023-24ನೆ ಸಾಲಿನ ಬಜೆಟ್‍ಗೆ ವಿಧಾನಸಭೆಯಲ್ಲಿ ಅನುಮೋದನೆ ಲಭಿಸಿತು. ಒಟ್ಟು 3,41,32,050 ಕೋಟಿ ರೂ.ಗಳ ಕರ್ನಾಟಕ ಧನವಿನಿಯೋಗ(ಸಂಖ್ಯೆ-2) ವಿಧೇಯಕ-2023ಕ್ಕೆ ಅನುಮೋದನೆ ಸಿಕ್ಕಿತು.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News