"ಸುಟ್ಟು ಕರಕಲಾಗಿರ್ತಾರೆ...": ಮಲ್ಲಿಕಾರ್ಜುನ ಖರ್ಗೆ ಮೈಬಣ್ಣದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರಗ ಜ್ಞಾನೇಂದ್ರ

Update: 2023-08-02 08:10 GMT

ತೀರ್ಥಹಳ್ಳಿ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ, ಮಂಗಳವಾರ ತೀರ್ಥಹಳ್ಳಿ ಪಟ್ಟಣದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಮಾಜಿ ಸಚಿವ ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪ್ರತಿಭಟನೆ ವೇಳೆ ಮಾತನಾಡುತ್ತಾ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ  ಆರಗ ಜ್ಞಾನೇಂದ್ರ, ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಪ್ರಸ್ತಾಪಿಸಿ ಅವರ ಮೈ ಬಣ್ಣದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. 

ʼʼನಮ್ಮ ದುರಾದೃಷ್ಟ ಎಂದ್ರೇ ಆ ಭಾಗದವರು ಫಾರೆಸ್ಟ್ ಮಿನಿಸ್ಟರ್ ಅಗಿದ್ದಾರೆ. ಫಾರೆಸ್ಟ್ ಇಲ್ಲದವರು ಮಿನಿಸ್ಟರ್ ಅಗಿದ್ದಾರೆ. ಅವರಿಗೆ ಮರ- ಗಿಡ ಎನ್ನುವುದರ ಬಗ್ಗೆ ಗೊತ್ತಿಲ್ಲ, ಮರದ ನೆರಳು ಗೊತ್ತಿಲ್ಲ..ಸುಟ್ಟು ಕರಕಲಾಗಿರ್ತಾರೆ..., ನಮ್ಮ ಖರ್ಗೆಯವರನ್ನ ನೋಡಿದ್ರೇ ಗೊತ್ತಾಗುತ್ತೆ, ಪಾಪ.., ತಲೆ ಕೂದಲು ಮುಚ್ಚಿಕೊಂಡಿದ್ದಕ್ಕೆ ಸ್ವಲ್ಪ ಉಳಿದುಕೊಂಡಿದ್ದಾರೆ. ಅದೇ ನೆರಳು ಅವರಿಗೆʼʼ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ʼʼಕಸ್ತೂರಿರಂಗನ್ ವರದಿ ಜಾರಿಯಾದರೆ ಸಮಸ್ಯೆʼʼ

ʼʼಮೂಲ ನಿವಾಸಿಗಳಿಲ್ಲದಿದ್ದರೆ ಸಹ್ಯಾದ್ರಿಯ ಅರಣ್ಯ ಶ್ರೇಣಿ ಉಳಿಯುತ್ತಿರಲಿಲ್ಲ. ದೆಹಲಿಯಲ್ಲಿ ಕುಳಿತು ಉಪಗ್ರಹ ಚಿತ್ರಗಳನ್ನು ಅವಲೋಕಿಸಿ ಅವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲಾಗಿದೆ. ಈಗಾಗಲೇ ಹಲವು ಕಾಯ್ದೆಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕಸ್ತೂರಿರಂಗನ್ ವರದಿ ಜಾರಿಯಾದರೆ ಸಮಸ್ಯೆ ಬಿಗಡಾಯಿಸಲಿದೆʼʼ ಎಂದು ಅವರು ಹೇಳಿದರು.


Full View


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News