ವಿಧಾನಸಭಾ ಅಧಿವೇಶನ | ಫಝಲ್ ಕೋಯಮ್ಮ ತಂಙಳ್, ನಿರೂಪಕಿ ಅಪರ್ಣಾ ಸಹಿತ ಅಗಲಿದ ಗಣ್ಯರಿಗೆ ಸಂತಾಪ

Update: 2024-07-15 12:51 GMT

ಸಿಎಂ ಸಿದ್ದರಾಮಯ್ಯ/ ನಿರೂಪಕಿ ಅಪರ್ಣಾ/ಫಝಲ್ ಕೋಯಮ್ಮ ತಂಙಳ್

ಬೆಂಗಳೂರು : ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್, ಮಾಜಿ ಶಾಸಕ ಕೆ.ವಸಂತ ಬಂಗೇರ, ಸಾಹಿತಿ ಪ್ರೊ.ಕಮಲಾ ಹಂಪನಾ, ನಿರೂಪಕಿ ಅಪರ್ಣಾ, ಖ್ಯಾತ ಧರ್ಮಗುರು ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಸೇರಿದಂತೆ ಇತ್ತೀಚೆಗೆ ನಿಧನರಾದ ಗಣ್ಯರಿಗೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸೋಮವಾರ ಬೆಳಗ್ಗೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಯು.ಟಿ.ಖಾದರ್ ಅವರು ಸಂತಾಪ ಸೂಚನಾ ನಿರ್ಣಯ ಮಂಡಿಸಿ, ಇತ್ತೀಚೆಗೆ ನಿಧನ ಹೊಂದಿರುವ ಗಣ್ಯರ ಹೆಸರುಗಳನ್ನು ಉಲ್ಲೇಖಿಸಿ ಸದನಕ್ಕೆ ತಿಳಿಸಿ, ಸಂತಾಪ ವ್ಯಕ್ತಪಡಿಸಿದರು.

ಸ್ಪೀಕರ್ ಖಾದರ್ ಅವರು ಮಂಡಿಸಿದ ಸಂತಾಪ ಸೂಚಕ ನಿರ್ಣಯವನ್ನು ಬೆಂಬಲಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷ ನಾಯಕ ಆರ್.ಅಶೋಕ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಸದಸ್ಯರಾದ ಹರೀಶ್ ಪೂಂಜ, ದರ್ಶನ್ ಧ್ರುವನಾರಾಯಣ, ಕೂಡ್ಲಿಗಿ ಶ್ರೀನಿವಾಸ್, ಶೈಲೇಂದ್ರ ಬೆಲ್ದಾಳೆ, ಹರೀಶ್ ಬಿ.ಪಿ., ಆರ್.ಕೃಷ್ಣಮೂರ್ತಿ, ಬಿ.ವೈ.ವಿಜಯೇಂದ್ರ, ವಸಂತಪ್ಪ, ಶಾರದ  ನಾಯ್ಕ್ ಸೇರಿದಂತೆ ಅಗಲಿದ ಗಣ್ಯರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದರು.

ಆ ಬಳಿಕ ಸದನದಲ್ಲಿ ಮೃತರ ಗೌರವಾರ್ಥ ಎಲ್ಲ ಸದಸ್ಯರು ಎದ್ದುನಿಂತು ಎರಡು ನಿಮಿಷ ಮೌನ ಆಚರಿಸಿ, ಅಗಲಿದ ಗಣ್ಯರಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

ಕೋಮು ಸಾಮರಸ್ಯಕ್ಕಾಗಿ ದುಡಿದಿದ್ದರು : ‘ಉಳ್ಳಾಲ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ 160ಕ್ಕೂ ಅಧಿಕ ಮೊಹಲ್ಲಾಗಳ ಖಾಝಿಯಾಗಿ ಸೇವೆ ಸಲ್ಲಿಸಿದ್ದ ಖ್ಯಾತ ಧರ್ಮಗುರು, ‘ಕೂರತ್ ತಂಙಳ್' ಎಂದೇ ಹೆಸರುವಾಸಿಯಾಗಿದ್ದ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಅವರು 1960ರಲ್ಲಿ ಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕ್ಕುಳಂ ಎಂಬಲ್ಲಿ ಜನಿಸಿದರು. ಪ್ರತಿಷ್ಠಿತ ಜಂಇಯ್ಯತುಲ್ ಉಲಮಾ, ಸಾವಿರಾರು ವಿದ್ಯಾರ್ಥಿಗಳಿಗೆ ಬಹುಮುಖ ಶಿಕ್ಷಣವನ್ನು ನೀಡುವ ಜಾಮಿಯ ಸಅದಿಯ್ಯ, ತಮ್ಮ ತಂದೆಯವರ ಸ್ಮರಣಾರ್ಥ ಸ್ಥಾಪಿಸಲಾದ ತಾಜುಲ್ ಉಲಮಾ ಎಜುಕೇಶನ್ ಸೆಂಟರ್ ಸೇರಿ ಹಲವು ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದ ತಂಙಳ್ ಅವರು, ಸರ್ವಧರ್ಮ ಸೌಹಾರ್ದತೆಯ ಪ್ರತಿಪಾದಕರಾಗಿದ್ದರು. ಜಾತಿ-ಮತ ಬೇಧವಿಲ್ಲದೆ ಸರ್ವರನ್ನೂ ಸಮಾನತೆಯಿಂದ ಕಾಣುತ್ತಿದ್ದ, ಕೋಮು ಸಾಮರಸ್ಯಕ್ಕಾಗಿ ದುಡಿದಿದ್ದರು. ಉಗ್ರವಾದ ಮತ್ತು ಸಮಾಜ ಕಂಟಕ ಶಕ್ತಿಗಳ ವಿರುದ್ಧ ಹೋರಾಡುತ್ತಿದ್ದ ಅವರು ಸರಳ ಜೀವನ ಮತ್ತು ಸಮಾಜ ಸೇವೆಯಿಂದ ಜನಾನುರಾಗಿಯಾಗಿದ್ದರು’

-ಯು.ಟಿ.ಖಾದರ್ ಸ್ಪೀಕರ್

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News