ವಿಧಾನಸಭೆ ಅಧಿವೇಶನ | ಎಂಟು ದಿನಗಳಲ್ಲಿ 37 ಗಂಟೆ ಕಾಲ ಕಲಾಪ : ಸ್ಪೀಕರ್ ಯು.ಟಿ.ಖಾದರ್

Update: 2024-07-25 14:23 GMT

ಬೆಂಗಳೂರು : ವಿಧಾನಸಭೆಯ ಅಧಿವೇಶನವು ಜು.15 ರಿಂದ 25ರವರೆಗೆ ಒಟ್ಟು ಎಂಟು ದಿನಗಳ ಕಾಲ ಸುಮಾರು 37 ಗಂಟೆ ಕಾರ್ಯಕಲಾಪ ನಡೆಸಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.

ಗುರುವಾರ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಧರಣಿ ನಡೆಯುವೆ ಸದನದ ಕಾರ್ಯಕಲಾಪದ ಸಂಕ್ಷಿಪ್ತ ವರದಿ ಪ್ರಕಟಿಸಿದ ಅವರು, ಈ ಅಧಿವೇಶನದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಗಣ್ಯರಿಗೆ ಸಂತಾಪ ಸೂಚನಾ ನಿರ್ಣಯ ಮಂಡಿಸಿ, ಅಂಗೀಕರಿಸಲಾಗಿದೆ. ರಾಷ್ಟ್ರಪತಿ, ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಬಗ್ಗೆ ಕಾರ್ಯದರ್ಶಿಯವರ ವರದಿಯನ್ನು ಮಂಡಿಸಲಾಗಿದೆ ಎಂದರು.

2024-25ನೆ ಸಾಲಿನ ಪೂರಕ ಅಂದಾಜುಗಳ ಮೊದಲನೆ ಕಂತನ್ನು ಮಂಡಿಸಿ, ಮತಕ್ಕೆ ಹಾಕಿ ಅಂಗೀಕರಿಸಲಾಗಿದೆ. ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ನೀಡಿರುವ ಮಾರ್ಚ್ 2023ಕ್ಕೆ ಕೊನೆಗೊಂಡ ವರ್ಷದ ರಾಜ್ಯ ಸರಕಾರದ ಹಣಕಾಸಿನ ವ್ಯವಹಾರಗಳ ಮೇಲೆ ನೀಡಿರುವ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಲಾಗಿದೆ ಎಂದು ಅವರು ಹೇಳಿದರು.

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರ ಕಾಯ್ದೆಯ ಅನುಷ್ಠಾನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನಾ ವರದಿ ಹಾಗೂ ಮಾರ್ಚ್ 2022ಕ್ಕೆ ಕೊನೆಗೊಂಡ ಇಲಾಖೆಗಳು ಮತ್ತು ಸಾರ್ವಜನಿಕ ವಲಯ ಉದ್ಯಮಗಳ ಮೇಲಿನ ಅನುಸರಣಾ ಲೆಕ್ಕಪರಿಶೋಧನಾ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ಯು.ಟಿ.ಖಾದರ್ ಮಾಹಿತಿ ನೀಡಿದರು.

ವಿಧಾನಸಭೆಯ ಸರಕಾರಿ ಭರವಸೆಗಳ ಸಮಿತಿ 2023-24ನೆ ಸಾಲಿನ ಎರಡನೆ ವರದಿ, ವಿಧಾನ ಮಂಡಲದ ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿಯ 39ನೆ ವರದಿ, ವಿಧಾನಸಭೆಯ ಅಂದಾಜುಗಳ ಸಮಿತಿಯ ಮೊದಲನೆ ವರದಿ, ವಿಧಾನಸಭೆಯ ಸದಸ್ಯರ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಯ ಮೂರನೆ ವರದಿ, ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಮೂರನೆ ವರದಿ ಹಾಗೂ ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಮೊದಲನೆ ವರದಿಯನ್ನು ಮಂಡಿಸಲಾಗಿದೆ ಎಂದು ಅವರು ತಿಳಿಸಿದರು.

ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳ ನಿಯಮ 212(1)ಕ್ಕೆ ತಿದ್ದುಪಡಿ ಮಾಡುವ ಸಂಬಂಧ ನಿಯಮಾವಳಿ ಸಮಿತಿಯ ಮಧ್ಯಂತರ ವರದಿಯನ್ನು ಜು.24ರಂದು ಸದನದಲ್ಲಿ ಮಂಡಿಸಿ, ತಿದ್ದುಪಡಿಯನ್ನು ಅಂಗೀಕರಿಸಲಾಗಿದೆ. 2024-25ನೆ ಸಾಲಿನ ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡಲು ಜು.25ರಂದು ಸದನವು ಸಭಾಧ್ಯಕ್ಷರಿಗೆ ಅಧಿಕಾರ ನೀಡಿದೆ ಎಂದು ಅವರು ಪ್ರಕಟಿಸಿದರು.

ಒಟ್ಟು 23 ಅಧಿಸೂಚನೆಗಳು, 146 ವಾರ್ಷಿಕ ವರದಿಗಳು, 160 ಲೆಕ್ಕ ಪರಿಶೋಧನಾ ವರದಿಗಳು, 5 ಅನುಪಾಲನಾ ವರದಿಗಳು, 4 ಅನುಸರಣಾ ವರದಿ ಹಾಗೂ ಒಂದು ಲೆಕ್ಕ ತಪಾಸಣಾ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ. ಧನವಿನಿಯೋಗ ವಿಧೇಯಕವು ಸೇರಿದಂತೆ ಒಟ್ಟು 13 ವಿಧೇಯಕಗಳನ್ನು ಮಂಡಿಸಲಾಗಿದ್ದು, 12 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ಉಳಿದಂತೆ 2024ನೆ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಜಂಟಿ ಪರಿಶೀಲನಾ ಸಮಿತಿಗೆ ಪರಿಶೀಲನೆಗಾಗಿ ಒಪ್ಪಿಸಲು ತೀರ್ಮಾನಿಸಲಾಗಿದೆ ಎಂದು ಸ್ಪೀಕರ್ ಹೇಳಿದರು.

2024ನೆ ಸಾಲಿನ ಕರ್ನಾಟಕ ಸಹಕಾರ ಸಂಘಗಳ(ತಿದ್ದುಪಡಿ) ವಿಧೇಯಕ, ಕರ್ನಾಟಕ ಸೌಹಾರ್ದ ಸಹಕಾರಿ(ತಿದ್ದುಪಡಿ) ವಿಧೇಯಕವನ್ನು ಪುನರ್ ಪರ್ಯಾಲೋಚಿಸಿ ಅಂಗೀಕರಿಸಲಾಗಿದೆ. ನಿಯಮ 60ರಡಿಯಲ್ಲಿ ನೀಡಿದ 9 ಸೂಚನೆಗಳ ಪೈಕಿ ಎಂಟನ್ನು ನಿಯಮ 69ಕ್ಕೆ ಪರಿವರ್ತಿಸಲಾಗಿದ್ದು, ಒಂದುಸೂಚನೆಯನ್ನು ತಿರಸ್ಕರಿಸಲಾಗಿದೆ. ಎರಡು ಸೂಚನೆಗಳನ್ನು ಚರ್ಚಿಸಲಾಗಿದೆ ಎಂದು ಖಾದರ್ ಹೇಳಿದರು.

ನಿಯಮ 69ರಡಿಯಲ್ಲಿ ಒಟ್ಟು 14 ಸೂಚನೆಗಳನ್ನು ಸ್ವೀಕರಿಸಲಾಗಿದೆ. ಈ ಅವಧಿಯಲ್ಲಿ ಒಟ್ಟು 16 ಅರ್ಜಿಗಳನ್ನು ಸದನಕ್ಕೆ ಒಪ್ಪಿಸಲಾಗಿದೆ. ಒಟ್ಟು 2370 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 135 ಪ್ರಶ್ನೆಗಳ ಪೈಕಿ 117 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಲಿಖಿತ ಮೂಲಕ ಉತ್ತರಿಸುವ 1902 ಪ್ರಶ್ನೆಗಳ ಪೈಕಿ 1438 ಪ್ರಶ್ನೆಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. 323 ಗಮನ ಸೆಳೆಯುವ ಸೂಚನೆಗಳ ಪೈಕಿ 170 ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ಶೂನ್ಯ ವೇಳೆಯಲ್ಲಿ 3 ಸೂಚನೆಗಳನ್ನು ಚರ್ಚಿಸಲಾಗಿದೆ. ಎಂದು ಅವರು ತಿಳಿಸಿದರು.

ನಾಲ್ಕು ನಿರ್ಣಯಗಳ ಅಂಗೀಕಾರ: ರಾಜ್ಯಕ್ಕೆ ಹಂಚಿಕೆ ಮಾಡಬೇಕಾದ ಲೋಕಸಭೆ ಸ್ಥಾನಗಳ ಮತ್ತು ಪ್ರತಿ ರಾಜ್ಯದ ವಿಧಾನಸಭೆಗೆ ನಿಗದಿಪಡಿಸಬೇಕಾದ ಸ್ಥಾನಗಳ ಸಂಖ್ಯೆಯನ್ನು 1971 ಜನಗಣತಿಯನ್ನಾಧರಿಸಿ ನಿರ್ಧರಿಸಬೇಕು. ‘ಒಂದು ರಾಷ್ಟ್ರ ಒಂದು ಚುನಾವಣೆ’ ಪ್ರಸ್ತಾವವು ಭಾರತದ ಪ್ರಜಾಸತ್ತಾತ್ಮಕ ಮತ್ತು ಒಕ್ಕೂಟ ವ್ಯವಸ್ಥೆಗೆ ಅಪಾಯವನ್ನುಂಟು ಮಾಡುವುದರಿಂದ ಈ ಪ್ರಸ್ತಾವವನ್ನು ಅನುಷ್ಠಾನಗೊಳಿಸಬಾರದೆಂಬ ನಿರ್ಣಯವನ್ನು ಸದನವು ಸರ್ವಾನುಮತದಿಂದ ಅಂಗೀಕರಿಸಿದೆ ಎಂದು ಸ್ಪೀಕರ್ ಹೇಳಿದರು.

ನೀಟ್ ಪರೀಕ್ಷಾ ವ್ಯವಸ್ಥೆಯಲ್ಲಿ ಆಗುತ್ತಿರುವ ಅಕ್ರಮಗಳನ್ನು ಪರಿಗಣಿಸಿ ರಾಷ್ಟ್ರೀಯ ಮಟ್ಟದಲ್ಲಿ ನೀಟ್ ಪರೀಕ್ಷೆಯನ್ನು ರದ್ದುಪಡಿಸಬೇಕು ಹಾಗೂ ಅರಣ್ಯವಾಸಿ ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ(ಅರಣ್ಯ ಹಕ್ಕುಗಳ ಮಾನ್ಯತೆ) ಅಧಿನಿಯಮ, 2006ರಡಿಯಲ್ಲಿ ಮಾಡಲಾದ ನಿಯಮಗಳನ್ನು ಸೂಕ್ತವಾಗಿ ಮತ್ತು ಸಮರ್ಪಕವಾಗಿ ಮಾರ್ಪಡಿಸುವ ಬಗ್ಗೆ ನಿರ್ಣಯ ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ಖಾದರ್ ಮಾಹಿತಿ ನೀಡಿದರು. ಬಳಿಕ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News