ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣ | ರಾಜ್ಯ ಸರಕಾರಕ್ಕೆ ಜನರ ಶಾಪ ತಟ್ಟಲಿದೆ : ಆರ್‌.ಅಶೋಕ್‌

Update: 2024-12-06 10:28 GMT

ಆರ್‌.ಅಶೋಕ್‌

ಬೆಂಗಳೂರು : ಸರಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಹಾಗೂ ಮಕ್ಕಳು ಸಾಯುತ್ತಿರುವಾಗ ಕಾಂಗ್ರೆಸ್‌ 20 ಕೋಟಿ ರೂ. ಖರ್ಚು ಮಾಡಿ ಸಮಾವೇಶ ಮಾಡಿದೆ. ಮಕ್ಕಳನ್ನು ಉಳಿಸದೆ ನೂರು ಸಮಾವೇಶ ಮಾಡಿದರೂ ಸರಕಾರಕ್ಕೆ ಜನರ ಶಾಪ ತಟ್ಟದೆ ಇರುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಆಕ್ರೋಶ ಹೊರಹಾಕಿದರು.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿ ಬದಲಾಗಿದೆ. ಬಳ್ಳಾರಿ ಆಸ್ಪತ್ರೆಯಲ್ಲಿ ಐವಿ ದ್ರಾವಣದಿಂದಾಗಿ ತಾಯಂದಿರು ಮೃತಪಟ್ಟಿದ್ದಾರೆ. ನಾನು ಹೋಗಿ ಎಚ್ಚರಿಕೆ ನೀಡಿದ ನಂತರವೂ ತಾಯಂದಿರು ಮೃತಪಟ್ಟಿದ್ದಾರೆ. ಹತ್ತು ತಿಂಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ 111 ನವಜಾತ ಶಿಶುಗಳು ಹಾಗೂ ಎಂಟು ತಿಂಗಳಲ್ಲಿ ಸುಮಾರು 28 ಬಾಣಂತಿಯರು ಸಾವನ್ನಪ್ಪಿದ್ದಾರೆ. ಮಹಿಳೆಯರಿಗೆ 2 ಸಾವಿರ ರೂ. ನೀಡುವ ಬದಲು ತಾಯಂದಿರ ಸಾವಿಗೆ ನ್ಯಾಯ ಕೊಡಿ ಎಂದು ಆಗ್ರಹಿಸಿದರು.

ಕೋವಿಡ್‌ ಸಮಯದಲ್ಲಿ ರಾಹುಲ್‌ ಗಾಂಧಿ, ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ, ಜನರ ಬಳಿಗೆ ಹೋಗಿ ಟವೆಲ್‌ನಲ್ಲಿ ಕಣ್ಣೀರು ಒರೆಸಿಕೊಂಡರು. ಈಗ ತಾಯಂದಿರು ಸತ್ತಿರುವಾಗ ಜನಕಲ್ಯಾಣ ಸಮಾವೇಶ ಮಾಡಿದ್ದಾರೆ. ಆ ಸಮಾವೇಶದಲ್ಲಿ ರಾಜಕೀಯ ಮಾತಾಡುವುದು ಬಿಟ್ಟರೆ, ಜನರ ಪರವಾಗಿ ಮಾತಾಡಿಲ್ಲ. 28 ಔಷಧಿಗಳು ಕಳಪೆ ಎಂದಮೇಲೂ ಅದೇ ಕಂಪನಿಯಿಂದ ಔಷಧಿ ಖರೀದಿಸಲಾಗಿದೆ. ಮಕ್ಕಳನ್ನು ಉಳಿಸುವ ಕೆಲಸ ಮಾಡದೆ ನೂರು ಸಮಾವೇಶ ಮಾಡಿದರೂ ಶಾಪ ಹಾಗೂ ಪಾಪ ತಟ್ಟಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಾವಿನ ಹೊಣೆಯನ್ನು ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಕಾಂಗ್ರೆಸ್‌ ನಾಯಕರು ಜನರ ಹಿತ ಕಡೆಗಣಿಸಿ ವಿರೋಧ ಪಕ್ಷಗಳನ್ನು ಬಗ್ಗುಬಡಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ನಾನು ಈಗಾಗಲೇ ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದೇನೆ. ಈ ಕುರಿತು ಲೋಕಾಯುಕ್ತಕ್ಕೆ ಪತ್ರ ಕೂಡ ಬರೆಯುತ್ತೇನೆ. ಇದನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡದೆ ಬಿಡುವುದಿಲ್ಲ. ಸಿಎಂ ಸಿದ್ದರಾಮಯ್ಯ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಜಿಡಿಪಿಯಲ್ಲಿ ನಂಬರ್‌ 1 ಎನ್ನುವ ಸಿಎಂ ಸಿದ್ದರಾಮಯ್ಯ ಬಾಣಂತಿಯರ ಸಾವಿನಲ್ಲೂ ನಂಬರ್‌ 1 ಎಂದು ಹೇಳಲಿ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News