ಬಂಡೀಪುರ | ಅರಣ್ಯ ಸಿಬ್ಬಂದಿ, ಬೇಟೆಗಾರರ ನಡುವೆ ಗುಂಡಿನ ಚಕಮಕಿ: ಓರ್ವ ಗುಂಡೇಟಿಗೆ ಬಲಿ

Update: 2023-11-05 05:03 GMT
ಸಾಂದರ್ಭಿಕ ಚಿತ್ರ

ಚಾಮರಾಜನಗರ : ಅರಣ್ಯ ಇಲಾಖೆಯ ಗುಂಡಿಗೆ ಕಳ್ಳಬೇಟೆಗಾರ ಬಲಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಯೋಜನೆಯ ಮದ್ದೂರು ಕಾಡಂಚಿನಲ್ಲಿ ರವಿವಾರ ವರದಿಯಾಗಿದೆ. 

ಇಂದು ಬೆಳಗಿನ ಜಾವ 2 ಗಂಟೆ ಸುಮಾರಿನಲ್ಲಿ 8-10 ಜನರಿದ್ದ ಕಳ್ಳ ಬೇಟೆಗಾರರ ಗುಂಪು ಅರಣ್ಯದೊಳಗೆ ಅಕ್ರಮವಾಗಿ ಪ್ರವೇಶಿಸಿ, ಸಾಂಬಾರ (ಕಡವೆ) ಬೇಟೆ ಮಾಡುತ್ತಿರುವ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿ ಮೇಲೆ ಕಳ್ಳ ಬೇಟೆಗಾರರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಪ್ರತಿ ದಾಳಿ ಮಾಡಿದ ಸಂದರ್ಭದಲ್ಲಿ ಒಬ್ಬ ಕಳ್ಳ ಬೇಟೆಗಾರ ಮೃತಪಟ್ಟಿದ್ದು, ಇತರರು ತಪ್ಪಿಸಿಕೊಂಡಿರುವುದಾಗಿ ವರದಿಯಾಗಿದೆ.

ಸ್ಥಳದಿಂದ ಸಾಂಬಾರ್ (ಕಡವೆ) ಮಾಂಸ (ತಲೆ ಮತ್ತು ಕಾಲಿನ ಭಾಗ) ಮತ್ತು ಬಂದೂಕನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಜಿಲ್ಲಾ ದಂಡಾಧಾರಿಗಳೂ ಆದ ಜಿಲ್ಲಾಧಿಕಾರಿಗಳು ಮತ್ತು ಕೊಳ್ಳೇಗಾಲದ ಉಪ ವಿಭಾಗಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ನಂಜೇಗೌಡನ ಕಟ್ಟೆ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇದು ಕಾಡಿನ ಗಡಿಯಿಂದ ಸುಮಾರು 2 ಕಿ.ಮೀ ದೂರದಲ್ಲಿದೆ. ಬಂಡೀಪುರ ಅರಣ್ಯ ವಲಯದ ನಿರ್ದೇಶಕರು, ಚಾಮರಾಜನಗರ ಜಿಲ್ಲಾಧಿಕಾರಿ ಮತ್ತು ಕೊಳ್ಳೆಗಾಲ ಉಪ ವಿಭಾಗಾಧಿಕಾರಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News