ಬೆಂಗಳೂರು ಪೊಲೀಸರಿಂದ ಕಾರ್ಯಾಚರಣೆ; ಮಹಾರಾಷ್ಟ್ರದಲ್ಲಿ ನಾಲ್ವರು ಅಂತಾರಾಜ್ಯ ಡ್ರಗ್ ಪೆಡ್ಲರ್ ಗಳ ಬಂಧನ
ಬೆಂಗಳೂರು, ಜು.4: ಮಹಾರಾಷ್ಟ್ರದಲ್ಲಿ ಕಾರ್ಯಾಚರಣೆ ಕೈಗೊಂಡು ನಾಲ್ವರು ಅಂತಾರಾಜ್ಯ ಡ್ರಗ್ ಪೆಡ್ಲರ್ಸ್‍ಗಳನ್ನು ಬಂಧಿಸಿರುವ ಗಿರಿನಗರ ಪೊಲೀಸರು, 50 ಲಕ್ಷ ರೂ. ಮೌಲ್ಯದ 96 ಕೆ.ಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ಸೈಯ್ಯದ್ ಸಾಧಿಕ್ ಹಾಗೂ ಮಹಾರಾಷ್ಟ್ರ ಮೂಲದ ಸಹೋದರರಾದ ಅಮೂಲ್, ಆಕಾಶ್, ರಾಹುಲ್ ಬಂಧಿತ ಆರೋಪಿಗಳಾಗಿದ್ದಾರೆ. ಮಹಾರಾಷ್ಟ್ರದ ಜಾಲ್ನಾದಲ್ಲಿ ಗ್ಯಾರೇಜ್ ಹೊಂದಿರುವ ಈ ಆರೋಪಿಗಳು ಸೈಯದ್ ಸಾಧಿಕ್ ಜೊತೆಗೂಡಿ ಗಾಂಜಾ ಮಾರಾಟ ದಂಧೆ ನಡೆಸುತ್ತಿದ್ದರು. ಒಡಿಶಾದಿಂದ ಗಾಂಜಾವನ್ನು ಬೆಂಗಳೂರಿಗೆ ತಂದು ಮಾರಾಟ ಮಾಡಿಸುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.
ಇನ್ನು ಸೈಯ್ಯದ್ ಸಾಧಿಕ್‍ನನ್ನು ಬಂಧಿಸಿದ್ದ ಗಿರಿನಗರ ಠಾಣಾ ಪೊಲೀಸರು, ನಂತರ ಆತ ನೀಡಿದ ಮಾಹಿತಿಯನ್ನು ಆಧರಿಸಿ ಮಹಾರಾಷ್ಟ್ರದ ಜಾಲ್ನಾಕ್ಕೆ ತೆರಳಿದ್ದಾರೆ. ಬಳಿಕ ಆರೋಪಿ ಸಹೋದರರನ್ನು ಬಂಧಿಸಿ ಕರೆ ತರುವಾಗ ಅವರ ಕುಟುಂಬಸ್ಥರು ಹೈಡ್ರಾಮಾ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದ್ದವರು ಕರ್ನಾಟಕ ಪೊಲೀಸರು ಎಂದು ವಿಷಯ ತಿಳಿದಿದ್ದರೂ, ತಮ್ಮವರನ್ನು ಯಾರೋ ಅಪಹರಿಸಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸರಿಗೆ ಸುಳ್ಳು ದೂರು ನೀಡಿದ್ದಾರೆ.
ದೂರು ಬಂದ ತಕ್ಷಣವೇ ಕಾರ್ಯಾಚರಣೆ ಕೈಗೊಂಡ ಪೊಲೀಸರು ಕರ್ನಾಟಕ ಪೊಲೀಸರನ್ನು ಅಡ್ಡಗಟ್ಟಿದ್ದು, ನಂತರ ಕರ್ನಾಟಕ ಪೊಲೀಸರು ತಮ್ಮ ಐಡಿ ಕಾರ್ಡ್ ತೋರಿಸಿ, ತಾವು ಆರೋಪಿಗಳನ್ನು ಬಂಧನ ಮಾಡಲು ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ. ಬಳಿಕ ಈ ಪ್ರಕರಣ ಇತ್ಯರ್ಥವಾಗಿದ್ದು, ಆರೋಪಿಗಳೊಂದಿಗೆ ಪೊಲೀಸರು ನಗರಕ್ಕೆ ಮರಳಿ ವಿಚಾರಣೆ ಕೈಗೊಂಡಿದ್ದಾರೆ.