ತುಂಗಭದ್ರಾ ಜಲಾಶಯ ಅವಘಡ | ಅಣೆಕಟ್ಟು, ಜನರ ಸುರಕ್ಷತೆಗೆ ಗಮನ ನೀಡಬೇಕು : ಬಸವರಾಜ ಬೊಮ್ಮಾಯಿ

Update: 2024-08-11 13:50 GMT

ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯ ಸರಕಾರ ತುಂಗಭದ್ರಾ ಅಣೆಕಟ್ಟೆಯ ಡ್ಯಾಮ್ ಮ್ಯಾನೇಜ್ ಮೆಂಟ್ ಕಮಿಟಿ ನೀಡಿರುವ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಳ್ಳದಿರುವುದರಿಂದ ಅಣೆಕಟ್ಟಿನ ಕ್ರಸ್ಟ್ ಗೇಟ್ ಮುರಿದು ಸಮಸ್ಯೆ ಎದುರಿಸುವಂತಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಅಣೆಕಟ್ಟೆ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣ ಆಗಿದೆ. ಅದು ಕಾಲ ಕಾಲಕ್ಕೆ ಹಲವಾರು ಸಮಸ್ಯೆ ಎದುರಿಸುತ್ತಾ ಬಂದಿದೆ. ಹೂಳು ತುಂಬಿರುವ ಬಗ್ಗೆ ದೊಡ್ಡ ಸಮಸ್ಯೆ ಆಗಿತ್ತು. ಹೀಗಾಗಿ ಸಮಾನಾಂತರವಾದ ಅಣೆಕಟ್ಟು ಕಟ್ಟಬೇಕು ಎಂದು ನಮ್ಮ ಅವಧಿಯಲ್ಲಿ ಡಿಪಿಆರ್ ಮಾಡಿ ಸಿದ್ಧತೆ ಮಾಡಲಾಗಿತ್ತು ಎಂದು ತಿಳಿಸಿದರು.

ಅಣೆಕಟ್ಟು ನಿರ್ವಹಣಾ ಸಮಿತಿ ಕೇಂದ್ರ ಸರಕಾರದಿಂದ ಬಂದು ಹಲವು ಸಲಹೆ ಕೊಟ್ಟಿರುತ್ತಾರೆ. ಅವರ ಸಲಹೆಗಳನ್ನು ರಾಜ್ಯ ಸರಕಾರ ಒತ್ತು ಕೊಟ್ಟು ಜಾರಿ ಮಾಡಬೇಕು. ಆದರೆ, ಸರಕಾರ ಗಂಭೀರವಾಗಿ ಅವರ ಸಲಹೆ ತೆಗೆದುಕೊಂಡಿಲ್ಲ ಅನಿಸುತ್ತದೆ. ಅವರ ಸಲಹೆ ಗಂಭೀರವಾಗಿ ಪರಿಗಣಿಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಅವರು ದೂರಿದರು.

ಸರಕಾರ ಈ ಕೂಡಲೇ ಚೈನ್ ಅಷ್ಟೇ ಅಲ್ಲ, ಸಂಪೂರ್ಣ ಗೇಟ್ ಭದ್ರಗೊಳಿಸಬೇಕು. ಹಣ ಬಿಡುಗಡೆ ಮಾಡಿ ಗೇಟ್ ದುರಸ್ತಿ ಕೆಲಸ ಮಾಡಬೇಕು. ಆಣೆಕಟ್ಟು ಹಾಗೂ ಜನರ ಸುರಕ್ಷತೆಯನ್ನು ಸರಕಾರ ಗಮನಿಸಬೇಕು. ಸರಕಾರದ ನಿರ್ಲಕ್ಷ್ಯತನದಿಂದಲೇ ಹೀಗೆ ಆಗಿರಬಹುದು. ಸರಕಾರ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ಆರೋಪಿಸಿದರು.

ಡ್ಯಾಂನಲ್ಲೇ ಇಂಜಿಯರ್‌ಗಳು, ತಾಂತ್ರಿಕ ತಜ್ಞರು ಇದ್ದರು. ಅವರೆಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಿತ್ತು. ಈ ವರ್ಷ ಅತಿ ಹೆಚ್ಚು ಮಳೆ ಬರುತ್ತದೆ ಎಂದು ಮೊದಲೇ ಹವಾಮಾನ ತಜ್ಞರು ಹೇಳಿದ್ದರು. ಅದನ್ನು ಅರ್ಥ ಮಾಡಿಕೊಂಡು ಇವರು ಕೆಲಸ ಮಾಡಬೇಕಿತ್ತು. ಆದರೆ ಸರಿಯಾದ ನಿರ್ವಹಣೆ ಮಾಡದೇ ಈ ಸಮಸ್ಯೆ ಆಗಿದೆ. ಈ ಬಗ್ಗೆ ತನಿಖೆ ನಡೆಸಿದರೆ ಸತ್ಯ ಹೊರಬರಲಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News