ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ : ಬಸವರಾಜ ಬೊಮ್ಮಾಯಿ

Update: 2024-08-25 12:06 GMT

ಹುಬ್ಬಳ್ಳಿ : ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪ ಮಾಡಿದ್ದಾರೆ‌.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ನಲ್ಲಿ ಏನು ನಡೆಯುತ್ತಿದೆಯೋ ಅದು ಅವರ ಆಂತರಿಕ ವಿಚಾರ, ರಾಜ್ಯದಲ್ಲಿ ಏನು ನಡೆಯುತ್ತಿದೆ ಅನ್ನುವುದು ಮುಖ್ಯ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಸ್ಥಗಿತಗೊಂಡಿದೆ. ಸಿದ್ದರಾಮಯ್ಯ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತೇ ಅನ್ನುವುದು ಅವರಿಗೆ ಬಿಟ್ಟದ್ದು. ವಿರೋಧ ಪಕ್ಷದ ಆರೋಪಗಳನ್ನು ನಿಭಾಯಿಸಲು ಸಿಎಂ ಸಭೆಗಳ ಮೇಲೆ ಸಭೆ ಮಾಡುತ್ತಿದ್ದಾರೆ" ಎಂದು ವ್ಯಂಗ್ಯವಾಡಿದರು.

ಒಳ್ಳೆಯ ಆಡಳಿತ ನೀಡಲಿ ಎಂದು ಜನತೆ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿದೆ. ಸರಕಾರದಲ್ಲಿ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಬರಗಾಲ ಬಂದರೂ ಸರಿಯಾದ ಪರಿಹಾರ ಕೊಡುತ್ತಿಲ್ಲ. ಮುಳುಗಡೆಯಾದ ಪ್ರದೇಶಗಳಿಗೆ ಪರಿಹಾರ ಕೊಟ್ಟಿಲ್ಲ. ಒಂದು ವಿಡಿಯೋ ಕಾಲ್ ಬಿಟ್ಟರೆ ಬೇರೇನೂ ಮಾಡಿಲ್ಲ. ಸಂಕಷ್ಟದಲ್ಲಿರೋ ಜನತೆಗೆ ಸ್ಪಂದನೆ ಮಾಡದ ಸರಕಾರ ರಾಜ್ಯದಲ್ಲಿದೆ. ಇಂತಹ ಸರಕಾರ ಬೇಕೇ? ಎಂಬ ಪ್ರಶ್ನೆ ಉದ್ಭವವಾಗಿದೆ ಎಂದರು.

ಭರತ್ ಬೊಮ್ಮಾಯಿ ಶಿಗ್ಗಾವಿಯಿಂದ ಸ್ಪರ್ಧಿಸಲ್ಲ :

ಶಿಗ್ಗಾವಿ ಕ್ಷೇತ್ರದಿಂದ ಭರತ್ ಬೊಮ್ಮಾಯಿ ಸ್ಪರ್ಧಿಸುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಭರತ್ ಬೊಮ್ಮಾಯಿಗೆ ಶಿಗ್ಗಾವಿ ಟಿಕೆಟ್ ಕೇಳಿಲ್ಲ. ಶಿಗ್ಗಾವಿ-ಸವಣೂರು ಕ್ಷೇತ್ರದ ಜನ ಭರತ್‌ಗೆ ಟಿಕೇಟ್ ಕೊಡಲು ಒತ್ತಡ ತಂದಿಲ್ಲ. ಜೋಶಿಯವರನ್ನು ಭೇಟಿಯಾಗಲು ಶಿಗ್ಗಾವಿ ಕ್ಷೇತ್ರದ ಜನ ಹೋಗಿದ್ದ ಉದ್ದೇಶವೇ ಬೇರೆ. ಆದರೆ ಅದು ಬೇರೆ ರೀತಿಯ ಪ್ರಚಾರವಾಗಿದೆ. ಪಕ್ಷಕ್ಕೆ ಕೆಲಸ ಮಾಡಿದ ನಿಷ್ಠರಿಗೆ ಟಿಕೆಟ್ ಕೊಡುವಂತೆ ಕೇಳಿದ್ದಾರೆ. ಕಷ್ಟದಲ್ಲಿ ಪಕ್ಷ ಕಟ್ಟಿದವರಿಗೆ ಟಿಕೆಟ್ ಕೊಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಜೋಶಿಯವರು ಭರತ್ ಹೆಸರು ಹೇಳಿದ್ದಾರೆ. ನಾನು ನನ್ನ ಮಗನಿಗೆ ಟಿಕೆಟ್ ಕೇಳಿಲ್ಲ. ನನ್ನ ಮಗ ಸ್ಪರ್ಧೆ ಮಾಡುವ ವಿಚಾರವಿಲ್ಲ" ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News