ರಾಜ್ಯ ಸರಕಾರ ಆರ್ಥಿಕವಾಗಿ ಕುಸಿಯುವ ಕಾಲ ಬಹಳ ದೂರವಿಲ್ಲ : ಬಸವರಾಜ ಬೊಮ್ಮಾಯಿ

Update: 2024-09-03 09:29 GMT

ಗದಗ : ಕಾಂಗ್ರೆಸ್ ನಲ್ಲಿ ಆಂತರಿಕವಾಗಿ ಗೊಂದಲ ಸೃಷ್ಟಿಯಾಗಿದೆ. ಮುಖ್ಯಮಂತ್ರಿಗಳ ಕುರ್ಚಿ ಅಲ್ಲಾಡುತ್ತಿದೆ ಎಂಬ ಭಾವನೆ ಸೃಷ್ಟಿಯಾಗಿದೆ. ಸಿಎಂ ಕುರ್ಚಿ ಮೇಲೆ ಕೂರಬೇಕೆಂಬ ಆಸೆ ಈಗ ಹೊರ ಹೊಮ್ಮುತ್ತಿದೆ. ಇದು ಸಹಜ ಪ್ರಕ್ರಿಯೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಮಂಗಳವಾರ ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಎಲ್ಲವೂ ಸರಿ ಇದೆ ಎಂದು ಹೇಳುತ್ತಲೇ ಒಳಗಡೆಯಿಂದ ದೋಣಿಗೆ ತೂತು ಕೊರೆಯುವುದು ರಾಜಕಾರಣ. ಕರ್ನಾಟಕದ ಇತಿಹಾಸ ನೋಡಿದಾಗ ಕಾಂಗ್ರೆಸ್ ನಲ್ಲಿ ವಿರೇಂದ್ರ ಪಾಟೀಲರು ಅತ್ಯಂತ ಬಲಿಷ್ಠ ಮುಖ್ಯಮಂತ್ರಿಗಳಾಗಿದ್ದರು, ಅವರ ಅವಧಿಯಲ್ಲಿ ರಾತ್ರೋ ರಾತ್ರಿ ಎಲ್ಲ ಶಾಸಕರು ಬದಲಾದರು. ಮುಂದೆ ದೇವರಾಜ್ ಅರಸು ಅವರನ್ನು ರಾತ್ರೋರಾತ್ರಿ ಬದಲಾವಣೆ ಮಾಡಿ ಆರ್.ಗುಂಡೂರಾವ್ ಅವರು ಮುಖ್ಯಮಂತ್ರಿಗಳಾದರು. ದೇವರಾಜ ಅರಸು ಅವರು ಎರಡನೇ ಬಾರಿ ಸ್ವಂತ ಶಕ್ತಿಯಲ್ಲಿ‌ ಆರಿಸಿ ಸಿಎಂ ಆದವರು. ಎಸ್. ಬಂಗಾರಪ್ಪ ಅವರಿಗೆ 183 ಶಾಸಕರ ಬಲವಿತ್ತು. ಆಗಲೂ ಸಿಎಂ ಬದಲಾದರು. ಈ ರಾಜಕಾರಣ ನಡಿಯುತ್ತಾ ಇರುತ್ತದೆ" ಎಂದರು.

ಆರ್ಥಿಕ ಕುಸಿತ ದೂರವಿಲ್ಲ :ಕಳೆದ ವರ್ಷ ನಾವು ಆಡಳಿತ ಮಾಡುವಾಗ ಆರ್ಥಿಕ ಸುಭದ್ರತೆ ತಂದಿರುವುದರಿಂದ ಈ ಸರಕಾರ ಅರ್ಧ ವರ್ಷದಿಂದ ಆಡಳಿತ ನಡೆಸಿಕೊಂಡು ಬಂದಿದೆ. ಈ ವರ್ಷ ಬಹಳ ಕಷ್ಟ ಇದೆ. ಅದರ ಜೊತೆಗೆ ಏಳನೇ ವೇತನ ಆಯೋಗದ ಶಿಫಾರಸ್ಸು ಈಡೇರಿಸಬೇಕು. ಹಲವಾರು ಖರ್ಚುಗಳು ಬರುತ್ತವೆ. ಇದೆಲ್ಲವನ್ನು ನೋಡಿದಾಗ ರಾಜ್ಯ ಸರಕಾರ ಆರ್ಥಿಕವಾಗಿ ಕುಸಿಯುವ ಕಾಲ ಬಹಳ ದೂರವಿಲ್ಲ. ಈಗ ಅಂಗನವಾಡಿ ಕಾರ್ಯಕರ್ತೆಯರ ಸಂಬಳ ಮೂರು ನಾಲ್ಕು ತಿಂಗಳಿಗೆ ನೀಡುತ್ತಿದ್ದಾರೆ. ಮುಂದೆ ಸರಕಾರಿ ನೌಕರರ ಸಂಬಳಕ್ಕೂ ಕಷ್ಟವಾಗಲಿದೆ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ನಾಯಕರು ಮುಡಾದಲ್ಲಿ ಹಗರಣ ಆಗಿಲ್ಲ ಎಂದು ಹೇಳುತ್ತಾರೆ. ಈಗ ಆ ಕಾಲದಲ್ಲಿದ್ದ ಕಮಿಷನರ್ ಅವರನ್ನು ತಾಂತ್ರಿಕ‌ ಸಮಿತಿ ವರದಿ ಆಧಾರದಲ್ಲಿ ಅಮಾನತು ಮಾಡಲಾಗಿದೆ. ತಾಂತ್ರಿಕ ಸಮಿತಿ ತಪ್ಪು ಕಂಡು ಹಿಡಿದಿದೆ. ಸರಕಾರ ಕಮಿಷನರ್ ಅವರನ್ನು ಅಮಾನತು ಮಾಡಿದೆ. ಹೀಗಾಗಿ ಎಲ್ಲವೂ ಕಾನೂನು ಬದ್ಧವಾಗಿ ನಡೆದಿಲ್ಲ ಎಂದು ಸರಕಾರ ಒಪ್ಪಿಕೊಂಡಂತಾಗಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News