ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಕೋರ್ ಕಮಿಟಿಯಲ್ಲಿ ಚರ್ಚಿಸಿ ತೀರ್ಮಾನ : ಬಸವರಾಜ ಬೊಮ್ಮಾಯಿ

Update: 2024-10-16 11:30 GMT

ಬೆಂಗಳೂರು: ʼಶಿಗ್ಗಾವಿ ಸೇರಿದಂತೆ ಮೂರು ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಎರಡು ಮೂರು ದಿನಗಳಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಲಾಗುವುದುʼ  ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ವಿಧಾನಸಭಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಕುರಿತು ಕೋರ್ ಕಮಿಟಿಯಲ್ಲಿ ಚರ್ಚೆ ಆಗಿದೆ. ಮೂರು ತಂಡಗಳು ಕ್ಷೇತ್ರಗಳಿಗೆ ತೆರಳಿ ಸ್ಥಳೀಯರ ಅಭಿಪ್ರಾಯ ಪಡೆದು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ನೀಡಿದ್ದಾರೆ. ಸದಸ್ಯತ್ವ ಅಭಿಯಾನದ ಸಂದರ್ಭದಲ್ಲಿಯೂ ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡುವ ಕೆಲಸ ಆಗಿದೆ ಎಂದು ಹೇಳಿದರು.

ಶಿಗ್ಗಾವಿ‌ ನಾನು ಪ್ರತಿನಿಧಿಸುವ ಕ್ಷೇತ್ರ ಆಗಿರುವುದರಿಂದ ನನ್ನ ಮೇಲೆ ಹೆಚ್ಚು ಜವಾಬ್ದಾರಿ ಇದೆ. ನಮ್ಮ ಪಕ್ಷದ ಉಸ್ತುವಾರಿ ಕಾರ್ಯದರ್ಶಿ ರಾಧಾ ಮೋಹನ್ ಅಗರವಾಲ್ ಅವರು ಕ್ಷೇತ್ರಕ್ಕೆ ಭೇಟಿ ನೀಡಿ, ಸ್ಥಳೀಯರ ಜೊತೆ ಸಭೆ ನಡೆಸಿ ಅಭಿಪ್ರಾಯ ಪಡೆದಿದ್ದಾರೆ. ಅಲ್ಲಿ ಚುನಾವಣೆಗೆ ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದ್ದೇವೆ. ಈ ಚುನಾವಣೆಯಲ್ಲಿ ನಮಗೆ ದೊಡ್ಡ ಪ್ರಮಾಣದ ಬೆಂಬಲ ಸಿಗುವ ಭರವಸೆ ಇದೆ. ನಾನು ಸ್ಪರ್ಧೆ ಮಾಡಿದಾಗ ಸಿಕ್ಕ ಸುಮಾರು 36 ಸಾವಿರ ಗೆಲುವಿನ ಅಂತರ ಈ ಬಾರಿಯೂ ಸಿಗುವ ನಂಬಿಕೆ ಇದೆ.

ಟಿಕೆಟ್ ಬಗ್ಗೆ ಈಗಾಗಲೇ ಚರ್ಚೆ ಆಗಿದೆ. ಆಕಾಂಕ್ಷಿಗಳ ಪಟ್ಟಿ ಕೂಡ ಕೊಟ್ಟಿದ್ದಾರೆ. ಎರಡು ಮೂರು ದಿನಗಳಲ್ಲಿ ರಾಜ್ಯ ಕೋರ್ ಕಮಿಟಿ ಚರ್ಚೆ ಮಾಡಿ ಹೈಕಮಾಂಡ್‌ಗೆ ಪಟ್ಟಿ ಕೊಡುತ್ತೇವೆ. ಕೇಂದ್ರ ನಾಯಕರ ಜೊತೆಯೂ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಮಗನ ಸ್ಪರ್ಧೆಗೆ ಪ್ರಸ್ತಾಪ ಇಟ್ಟಿಲ್ಲ :

ನನ್ನ ಮಗನ ಸ್ಪರ್ಧೆ ಬಗ್ಗೆ ನನಗೆ ಇಚ್ಚೆಯಿಲ್ಲ. ನಾನು ಆ ಪ್ರಸ್ತಾವನೆಯನ್ನು ಮುಂದೆ ಇಟ್ಟಿಲ್ಲ. ಕೋರ್ ಕಮಿಟಿ ಸಭೆಯಲ್ಲಿ ಪ್ರಸ್ತಾಪ ಆಗಿದ್ದು, ಆ ಸಭೆಯಲ್ಲಿ ನಾನು ಹಾಜರಾಗದೇ‌ ಇದ್ದಿದ್ದರಿಂದ ನನ್ನ ಜೊತೆ ಚರ್ಚಿಸಿ ತೀರ್ಮಾನಿಸುವುದಾಗಿ ಪಕ್ಷದ ರಾಜ್ಯಾಧ್ಯಕ್ಷರು ಹೇಳಿದ್ದಾರೆ ಎಂದರು.

ಲೋಕಸಭಾ ಚುನಾವಣೆ ಬಳಿಕ ನನ್ನ ಪುತ್ರ ಎಲ್ಲಿಯೂ ಕ್ಷೇತ್ರದಲ್ಲಿ ಓಡಾಡಿಲ್ಲ. ನನ್ನ ಮಗನ ಹೆಸರನ್ನು ಬಹಳ ಜನರು ಸೂಚಿಸಿರಬಹುದು. ಆದರೆ ನಾವಂತೂ ಎಲ್ಲಿಯೂ ಹೆಸರು ಪ್ರಸ್ತಾಪ ಮಾಡಿಲ್ಲ. ಅರ್ಜಿಯನ್ನೂ ಹಾಕಿಲ್ಲ. ಅವನು ವ್ಯೆಯಕ್ತಿಕವಾಗಿ ಅವನು ವ್ಯಾಪಾರದ ಕಡೆ ಗಮನ ಕೊಟ್ಟಿದ್ದಾನೆ. ಅದಕ್ಕೆ ಹಿನ್ನಡೆ ಆಗಬಾರದು ಎಂತಲೂ ಇದೆ. ಜೊತೆಗೆ ಬೇರೆಯವರಿಗೆ ಅವಕಾಶ ಮಾಡಿಕೊಡುವ ಬಗ್ಗೆ ಆಲೋಚನೆ ನಡೆದಿದೆ ಎಂದು ಹೇಳಿದರು.

ಮುಡಾ ಅವ್ಯವಹಾರ ಆಗಿದೆ :

ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರೀಗೌಡ ರಾಜೀನಾಮೆ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಡಾದಲ್ಲಿ ಯಾವುದೇ ತಪ್ಪುಗಳಾಗಿಲ್ಲ, ಕಾನೂನು ಉಲ್ಲಂಘನೆ ಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಅವರೇ ಸೈಟ್ ವಾಪಸ್ಸು ಕೊಟ್ಟರು. ಮುಡಾ ಅವ್ಯವಹಾರ ತನಿಖೆ ನಡೆಯುವ ಸಂದರ್ಭದಲ್ಲಿ ನಾನು ತಪ್ಪು ಮಾಡಿಲ್ಲ. ರಾಜೀನಾಮೆ ಕೊಡಲ್ಲ ಅಂತ ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಈಗ ಮುಡಾ ಅಧ್ಯಕ್ಷ ರಿಂದ ರಾಜೀನಾಮೆ ಕೊಡಿಸಿದ್ದಾರೆ. ಇದರ ಅರ್ಥ ಅಲ್ಲಿ ಅವ್ಯವಹಾರ ಆಗಿದೆ ಎಂದು ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News