ಭಿಕ್ಷುಕರ ಸೆಸ್ ಹಣ ಜಮೆ: ಪ್ರಮಾಣಪತ್ರ ಸಲ್ಲಿಸಲು ಬಿಬಿಎಂಪಿಗೆ ಹೈಕೋರ್ಟ್ ಸೂಚನೆ
ಬೆಂಗಳೂರು, ಸೆ.14: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹ ಮಾಡಲಾಗಿರುವ 80 ಕೋಟಿ ಭಿಕ್ಷುಕರ ಸೆಸ್(ಉಪ ಕರ) ಮೊತ್ತವನ್ನು ಕೇಂದ್ರ ಪರಿಹಾರ ಸಮಿತಿಗೆ ಜಮೆ ಮಾಡುವ ಬಗ್ಗೆ ಒಂದು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಲು ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
ನಗರದ ರಸ್ತೆಗಳಲ್ಲಿ ಮಕ್ಕಳನ್ನು ಆಟಿಕೆ ಸಾಮಾನು ಮಾರಾಟ ಮಾಡಲು ಹಾಗೂ ಭಿಕ್ಷಾಟನೆಗೆ ಬಳಸಿಕೊಳ್ಳುತ್ತಿರುವ ವಿಚಾರವಾಗಿ ʼಲೆಟ್ಸ್ ಕಿಟ್ ಫೌಂಡೇಷನ್ʼ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
ಬಿಬಿಎಂಪಿ ಪರ ವಕೀಲರು, ಇಲ್ಲಿಯವರೆಗೆ ಸಂಗ್ರಹ ಮಾಡಲಾದ ಭಿಕ್ಷುಕರ ಸೆಸ್‍ನ ಒಟ್ಟು ಮೊತ್ತದಲ್ಲಿ 470 ಕೋಟಿಯನ್ನು ಕೇಂದ್ರ ಪರಿಹಾರ ಸಮಿತಿಗೆ ಈಗಾಗಲೇ ಪಾವತಿಸಲಾಗಿದೆ. 80 ಕೋಟಿ ಬಾಕಿ ಇದ್ದು, ಅದನ್ನು ಪಾವತಿಸಲು ಮೂರು ವಾರಗಳ ಕಾಲಾವಕಾಶಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು ದೊಡ್ಡ ಮೊತ್ತವನ್ನು ಪಾವತಿ ಮಾಡಿದ್ದು, ಕೇವಲ 80 ಕೋಟಿಯಷ್ಟೇ ಬಾಕಿ ಉಳಿದಿದೆ. ಇಷ್ಟು ಸಣ್ಣ ಮೊತ್ತವನ್ನು ಪಾವತಿಸಲು ಮೂರು ವಾರ ಏಕೆ? 40 ರಂತೆ ಎರಡು ವಾರಗಳಲ್ಲಿ 80 ಕೋಟಿಯನ್ನು ಕೇಂದ್ರ ಪರಿಹಾರ ಸಮಿತಿಗೆ ಪಾವತಿಸಬಹುದಲ್ಲವೇ ಎಂದು ಕೇಳಿತು. ಅದಕ್ಕೆ ಬಿಬಿಎಂಪಿ ಪರ ವಕೀಲರು, ಪಾಲಿಕೆಯ ಆರ್ಥಿಕ ಸ್ಥಿತಿಯ ನೋಡಿ ಮಂದೇ ಹೆಜ್ಜೆ ಇಡಬೇಕಾಗುತ್ತದೆ ಎಂದರು. ಇದಕ್ಕೆ ಪೀಠವು, ಬಾಕಿ 80 ಕೋಟಿಯನ್ನು ಕೇಂದ್ರ ಪರಿಹಾರ ಸಮಿತಿಗೆ ಜಮೆ ಮಾಡುವ ಬಗ್ಗೆ ಒಂದು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಿ, ಅದನ್ನು ಆಧರಿಸಿ ಮುಂದಿನ ನಿರ್ದೇಶನ ನೀಡಲಾಗುವುದು ಎಂದು ಬಿಬಿಎಂಪಿ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.