ವೇತನ ಹೆಚ್ಚಳ, ಭಡ್ತಿಗೆ ಆಗ್ರಹಿಸಿ ಕೆಎಸ್ಸಾರ್ಟಿಸಿ ನೌಕರರಿಂದ ಡಿ.9ಕ್ಕೆ ‘ಬೆಳಗಾವಿ ಚಲೋ’

Update: 2024-11-27 14:48 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಸಾರಿಗೆ ನೌಕರರಿಗೆ ಶೇ.25ರಷ್ಟು ವೇತನ ಹೆಚ್ಚಳ, 2020ರಿಂದ ಆಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಬಾಕಿ ಹಣ ಪಾವತಿ, ವಿವಿಧ ಭತ್ಯೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಡಿ.9ಕ್ಕೆ ‘ಬೆಳಗಾವಿ ಚಲೋ’ ಹಮ್ಮಿಕೊಳ್ಳಲಾಗಿದೆ ಎಂದು ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಶನ್‍ನ ಎಚ್.ವಿ.ಅನಂತಸುಬ್ಬರಾವ್ ತಿಳಿಸಿದ್ದಾರೆ.

ಬುಧವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ಸಾರಿಗೆ ನಿಗಮಗಳು, ನೌಕರರ ಸಾವಿರಾರು ಕೋಟಿ ರೂ.ಭವಿಷ್ಯ ನಿಧಿ ಬಾಕಿ ಉಳಿಸಿಕೊಂಡಿವೆ. ಸಾರಿಗೆ ನೌಕರರ ವೇತನ, ಎಲ್ಲ ನೌಕರಿಗೂ ಉಚಿತ ಔಷಧ ಪೂರೈಕೆ, ಎಲ್ಲ ನೌಕರರಿಗೂ ಪಾಳಿ ವ್ಯವಸ್ಥೆ ಜಾರಿ ಮಾಡಬೇಕು ಎಂದು ಹೇಳಿದರು.

ಚಾಲಕರು, ನಿರ್ವಹಕರು, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿ ಸೇರಿದಂತೆ ಇತರೆ ಎಲ್ಲ ನೌಕರರ ಬಾಟ, ಮಾಸಿಕ, ದೈನಂದಿನ ಭತ್ಯೆಗಳನ್ನು 5 ಪಟ್ಟು ಹೆಚ್ಚಿಸಬೇಕು. ಹೊಲಿಗೆ ಭತ್ಯೆ, ಶೂ, ಜರ್ಸಿ, ರೈನ್‍ಕೋಟ್ ಇತ್ಯಾದಿಗಳ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಬೇಕು. ಎಲ್ಲ ನಿರ್ವಾಹಕರಿಗೂ ಕ್ಯಾಶಿಯರ್‌ಗಳಿಗೆ ಸಮಾನವಾದ ಭತ್ಯೆ ನೀಡಬೇಕು. ಎಲ್ಲ ನೌಕರರಿಗೂ ಪ್ರತಿ ತಿಂಗಳು ಹೊರರೋಗಿಗಳ ಚಿಕಿತ್ಸೆ ವೆಚ್ಚಕ್ಕಾಗಿ 2ಸಾವಿರ ರೂ.ನೀಡಬೇಕು ಎಂದು ಅನಂತಸುಬ್ಬರಾವ್ ಮನವಿ ಮಾಡಿದರು.

ಇಎಸ್‍ಐ ಮಾದರಿಯಲ್ಲಿ ಆಡಳಿತ ವರ್ಗದ ಮೂಲ ವೇತನದ ಶೇ.4.5ರಷ್ಟು ಹಾಗೂ ಕಾರ್ಮಿಕರಿಂದ ಶೇ.0.5ರಷ್ಟು ವಂತಿಕೆ ಸಂಗ್ರಹಿಸಿ ಟ್ರಸ್ಟ್ ರಚಿಸಿ, ಸಾರಿಗೆ ನೌಕರರಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವಂತೆ ಯೋಜನೆ ರೂಪಿಸಬೇಕು. 2023ರ ಅವಧಿಗೆ ನೌಕರರಿಂದ ಕಡಿತಗೊಳಿಸಲಾಗಿದ್ದ ಅಪಘಾತ ವಿಮೆ ಪ್ರೀಮಿಯಂ ಹಣವನ್ನು ಮರುಪಾವತಿಸಬೇಕು ಎಂದು ಅವರು ಆಗ್ರಹಿಸಿದರು.

ಮುದ್ರಾಣಾಲಯದ ಹಾಗೂ ಕಾರ್ಯಗಾರಗಳ ತಾಂತ್ರಿಕ ಸಿಬ್ಬಂದಿಗಳ ಮುಂಭಡ್ತಿ ಅವಕಾಶಗಳು ಇಲ್ಲದ ಕಾರಣ ಸದರಿ ಸಿಬ್ಬಂದಿಗಳಿಗೆ ಪ್ರತಿ 10ವರ್ಷಗಳಿಗೊಮ್ಮೆ ಹೆಚ್ಚುವರಿ ವಾರ್ಷಿಕ ವೇತನ ಭಡ್ತಿ ನೀಡಿ ಪ್ರೋ ತ್ಸಾಹಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿನ 15ದಿನದೊಳಗೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ಡಿ.31ರಿಂದ ಸಾರಿಗೆ ನೌಕರರು ಮುಷ್ಕರ ಪ್ರಾರಂಭಿಸಲಾಗುತ್ತದೆ ಎಂದು ಅನಂತ್ ಸುಬ್ಬಾರಾವ್ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಲಿಯ ಬಿ.ಜಯದೇವರಾಜೇ ಅರಸು, ಕೆಎಸ್ಸಾರ್ಟಿಸಿ ನೌಕರರ ಫೆಡರೇಷನ್‍ನ ಎಚ್.ಡಿ.ರೇವಪ್ಪ, ಕೆಎಸ್ಸಾರ್ಟಿಸಿ ಎಸ್‍ಸಿ-ಎಸ್‍ಟಿ ಎಂಪ್ಲಾಯೀಸ್ ಯೂನಿಯನ್‍ನ ವೆಂಕಟರವಣಪ್ಪ, ಎಸ್‍ಸಿ-ಎಸ್‍ಟಿ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಸೋಮಣ್ಣ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News