ರಾಜ್ಯದ ನೀರಾವರಿ ಯೋಜನೆಗೆ ಅನುಮತಿ ಕೋರಿ ಡಿ.ಕೆ.ಶಿವಕುಮಾರ್ ಮನವಿ

Update: 2024-11-27 15:06 GMT

ಹೊಸದಿಲ್ಲಿ: ರಾಜ್ಯದ ನೀರಾವರಿ ಯೋಜನೆಗಳಿಗೆ ಅನುಮತಿ ಕೊಡಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯನ್ನು ಬುಧವಾರ ಹೊಸದಿಲ್ಲಿಯಲ್ಲಿ ಭೇಟಿ ಮಾಡಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಪ್ರಹ್ಲಾದ್ ಜೋಶಿಗೆ ಜನ್ಮದಿನದ ಶುಭಾಶಯ ಕೋರಿದ ಉಪ ಮುಖ್ಯಮಂತ್ರಿ, ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು.

ಮೇಕೆದಾಟು ಯೋಜನೆಯು ಸುಸ್ಥಿರ ಕುಡಿಯುವ ನೀರಿನ ಯೋಜನೆಯಾಗಿದ್ದು, ಈ ಯೋಜನೆ ಜಾರಿ ಅಗತ್ಯವಾಗಿದೆ. ಕೃಷ್ಣಾ ವಿವಾದಿತ ನೀರು ನ್ಯಾಯಾಧಿಕರಣ 2ರ ತೀರ್ಪಿನ ಅನ್ವಯ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಗೇಜೆಟ್ ನೋಟಿಫಿಕೇಷನ್ ಹೊರಡಿಸಬೇಕು. ಇದರ ಜತೆಗೆ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಬೇಕು ಎಂದು ಶಿವಕುಮಾರ್ ಮನವಿ ಮಾಡಿದರು.

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸಿ ನೀರಾವರಿ ಸೌಲಭ್ಯ ಹೆಚ್ಚಿಸಿ ರೈತರಿಗೆ ನೀರು ಒದಗಿಸಿಕೊಡಬೇಕು. ಇನ್ನು ಮಹಾದಾಯಿ ಯೋಜನೆಗೆ ಅಗತ್ಯ ಅನುಮತಿ ಕೊಡಿಸಿ ಈ ಭಾಗದಲ್ಲಿರುವ ನೀರಿನ ಅಭಾವ ನೀಗಿಸಬೇಕಿದೆ. ಈ ಪ್ರಮುಖ ಯೋಜನೆಗಳ ಜಾರಿಗೆ ಕೇಂದ್ರ ಸರಕಾರವು ರಾಜ್ಯಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಕೋರಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News