ಸಂಪುಟ ಪುನಾರಚನೆ ಮಾಡಿದರೆ ಒಳ್ಳೆಯದು, ಬೇರೆಯವರಿಗೂ ಅವಕಾಶ ಸಿಗಬೇಕು : ದಿನೇಶ್ ಗುಂಡೂರಾವ್
ಶಿವಮೊಗ್ಗ : ʼಎರಡು ವರ್ಷದ ಬಳಿಕ ಸಂಪುಟ ಪುನಾರಚನೆ ಮಾಡಿದರೆ ಒಳ್ಳೆಯದು. ಬೇರೆಯವರಿಗೂ ಅವಕಾಶ ಸಿಗಬೇಕುʼ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬುಧವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬೇರೆಯವರಿಗೂ ಅವಕಾಶ ಸಿಗಬೇಕು ಎಂಬ ನಿಟ್ಟಿನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ನಾವೇ ಇರಬೇಕು, ಬೇರೆಯವರು ಮಂತ್ರಿಗಳಾಗಬಾರದು ಎಂದೇನಿಲ್ಲ. ಅದಕ್ಕೋಸ್ಕರ ಎಲ್ಲರೂ ತಯಾರಾಗಿರಬೇಕು" ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಗೆ ಮೂರು ಮೊಬೈಲ್ ಮೆಡಿಕಲ್ ಯೂನಿಟ್ ನೀಡಲಾಗುತ್ತದೆ. ಇದು ಸಾಗರ, ಹೊಸನಗರ ಹಾಗೂ ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಸೇವೆ ನೀಡಲಿವೆ. ನಮ್ಮ ಇಲಾಖೆಯಲ್ಲಿ ಶೇ.30 ರಿಂದ 40 ರಷ್ಟು ಸಿಬ್ಬಂದಿ ಕೊರತೆ ಇದೆ. ಅದಷ್ಟು ಬೇಗ ಸಿಬ್ಬಂದಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಭದ್ರಾವತಿಯಲ್ಲಿ ಹೊಸ ಆಸ್ಪತ್ರೆ ನಿರ್ಮಿಸಬೇಕು ಎಂದು ಮನವಿ ಬಂದಿದೆ. ಈ ಕುರಿತು ಪರಿಶೀಲನೆ ನಡೆಸಲಾಗುವುದು. ರಿಪ್ಪನ್ಪೇಟೆ ಹಾಗೂ ಚಂದ್ರಗುತ್ತಿ ಪಿಹೆಚ್ಸಿಗಳನ್ನು ಮೇಲ್ದರ್ಜೆಗೇರಿಸಬೇಕೆಂಬ ಮನವಿ ಬಂದಿದ್ದು, ಇವೆರಡನ್ನು ಮೇಲ್ದರ್ಜೆಗೇರಿಸಲಾಗುವುದು. ಸಾಗರ ಆಸ್ಪತ್ರೆ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನೂ ಮೇಲ್ದರ್ಜೆಗೇರಿಸಲಾಗುತ್ತದೆ ಎಂದು ತಿಳಿಸಿದರು.