ನಮ್ಮ ಹೋರಾಟದಿಂದ ಕಾಂಗ್ರೆಸ್ ಗೆ ಲಾಭವಾಗಿದ್ದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ರಾಯಚೂರು : ವಕ್ಪ್ ವಿರುದ್ಧದ ನಮ್ಮ ಹೋರಾಟದಿಂದ ಕಾಂಗ್ರೆಸ್ ಗೆ ಲಾಭವಾಗಿದ್ದು ಬಿಜೆಪಿಯ ನಾಯಕರು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನಮ್ಮದು ರೈತರ ಪರವಾದ ಹೋರಾಟ ಯಾರ ಪರವಾನಗಿ ಪಡೆಯುವ ಅಗತ್ಯವಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಗೆ ವಕ್ಫ್ ಆಸ್ತಿ ಕುರಿತ ಮನವಿ ಪತ್ರ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಅವ್ಯವಹಾರ ವಿರೋಧಿಸಿ ಪಾದಯಾತ್ರೆ ನಡೆಸುವ ಉದ್ದೇಶ ಹೊಂದಲಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ಧರಾಮಯ್ಯನವರು 87ಕೋಟಿ ರೂ. ಅವ್ಯವಹಾರವಾಗಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಅದೇ ರೀತಿ ವಕ್ಫ್ ಪಾದಯಾತ್ರೆಗೆ ಯಾರ ಪರವಾನಗಿ ದೊರಕಲಿಲ್ಲ. ವಕ್ಫ್ ಜಮೀನು ಕಬಳಿಕೆ ಸಂಬಂಧಿಸಿದ ವಿಜಯಪುರದಲ್ಲಿ ನಡೆದ ಹೋರಾಟಕ್ಕೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ ಹಾಗೂ ಸಂಸತ್ತಿನ ಜಂಟಿ ಸಮಿತಿ ಅಧ್ಯಕ್ಷರೇ ಆಗಮಿಸಿದ್ದರು. ಅಲ್ಲದೇ ಸಂಸದರು, ಶಾಸಕರು ಬಂದಿದ್ದರು. ಆದರೂ ಯಾರ ಪರವಾನಗಿ ಪಡೆದಿಲ್ಲ. ಆದರೆ ಕೆಲವರು ಹೈಕಮಾಂಡ್ ಗೆ ದೂರು ನೀಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.