ರಾಯಚೂರು | ದೇವಸ್ಥಾನದ ಚಿನ್ನಾಭರಣ, ನಗದು ಕಳ್ಳತನ: ಮೂವರ ಬಂಧನ
Update: 2024-11-25 05:26 GMT
ರಾಯಚೂರು: ಸಿರವಾರ ತಾಲ್ಲೂಕಿನ ಅತ್ತನೂರು ಗ್ರಾಮದ ಶ್ರೀ ಗಡಾದ ದುರ್ಗಾದೇವಿ ದೇವಸ್ಥಾನದಲ್ಲಿ ನ.21 ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ ಕವಿತಾಳ ಠಾಣಾ ಪೊಲೀಸರು ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಕಪಗಲ್ ಗ್ರಾಮದ ನಿವಾಸಿಗಳಾದ ಹುಸೇನಿ, ಶರಣಬಸವ, ಹಾಗೂ ವೀರಸ್ವಾಮಿ ಎಂದು ಗುರುತಿಸಲಾಗಿದೆ. 21 ರಂದು ಬೆಳಗಿನ ಜಾವ ದೇವಸ್ಥಾನದ ಬಾಗಿಲು ಕೀಲಿ ಮುರಿದು ಚಿನ್ನ, ಬೆಳ್ಳಿಯ ಆಭರಣಗಳು ಮತ್ತು 6,02,613 ರೂ ನಗದು ದೋಚಿ ಪರಾರಿಯಾಗಿದ್ದರು.
ಈ ಬಗ್ಗೆ ನೀಡಲಾದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಕಾರ್ಯಚರಣೆ ನಡೆಸಿದ ಕವಿತಾಳ ಠಾಣೆಯ ಪೊಲೀಸರು, ಆರೋಪಿಗಳನ್ನು ಬಂಧಿಸಿ 2,84,000 ರೂ ಮೌಲ್ಯದ, 50 ಗ್ರಾಂ ಬಂಗಾರ, 3,15, 657 ರೂ ಮೌಲ್ಯದ, 4330 ಗ್ರಾಂ ಬೆಳ್ಳಿ ವಶಪಡಿಸಿಕೊಂಡಿದ್ದಾರೆ.