ರಾಯಚೂರು | ಕೇಂದ್ರ, ರಾಜ್ಯ ಸರಕಾರದ ರೈತ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

Update: 2024-11-26 14:19 GMT

ರಾಯಚೂರು : ಕೇಂದ್ರ, ರಾಜ್ಯ ಸರಕಾರದ ರೈತ, ಕಾರ್ಮಿಕ ಹಾಗೂ ಜನ ವಿರೋಧಿ ನೀತಿಗಳನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ (ಎಸ್ಕೆಎಂ) ಮತ್ತು ಅಖಿಲ ಭಾರತ ಜಂಟಿ ಕಾರ್ಮಿಕರ ಸಂಘಟನೆಗಳ ವೇದಿಕೆ (ಜೆಸಿಟಿಯು) ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಕೇಂದ್ರ ಬಸ್ ನಿಲ್ದಾಣದ ತಹಶೀಲ್ದಾರ್ ಕಚೇರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು.

ನಂತರ ಜಿಲ್ಲಾಡಳಿತದ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರದ ಬಿಜೆಪಿ ಸರಕಾರವು ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳ ಜಾರಿಗೆ ಮುಂದಾಗಿ ಮುಖಭಂಗಗೊಂಡಿದ್ದರೂ ಸಹ ಅದನ್ನು ಸಂಪೂರ್ಣವಾಗಿ ಹಿಂಪಡೆಯಲು ಮೀನಾಮೇಷ ಮಾಡುತ್ತಿದೆ. ಕಳೆದ ಮೂರು ಅವಧಿಯಲ್ಲಿಯೂ ಕಾರ್ಪೋರೇಟ್ ಪರ ಆಡಳಿತ ನಡೆಸುತ್ತಾ ಬಂದಿದೆ. ರೈತ, ಕಾರ್ಮಿಕ ಹಾಗೂ ಜನಸಾಮಾನ್ಯರ ವಿರುದ್ಧವಾಗಿಯೇ ಕಾಯ್ದೆಗಳನ್ನು ರೂಪಿಸುತ್ತಾ ಬಂದಿರುವ ಕೇಂದ್ರದ ವಿರುದ್ಧ ಜನಜಾಗೃತಿ ಮೂಡಿಸುವ ಅಗತ್ಯವಿದೆ. ಕರ್ನಾಟಕ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಪ್ರಣಾಳಿಕೆಯನ್ನು ಹೊರಡಿಸಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಹ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಕೆ.ಜಿ.ವೀರೇಶ, ಪ್ರಭಾಕಾರ ಪಾಟೀಲ, ಅಮೀನಪಾಷಾ ದಿದ್ದಿಗಿ, ಡಿ.ಎಸ್.ಶರಣಬಸವ, ಖಾಜಾ ಅಸ್ಲಂ ಅಹ್ಮದ್, ಕರಿಯಪ್ಪ ಅಚ್ಚೊಳ್ಳಿ, ಮಹೇಶ ಚೀಕಲಪರ್ವಿ, ಆಂಜನೇಯ ಕುರುಬದೊಡ್ಡಿ, ಮಲ್ಲನಗೌಡ, ಶ್ರೀನಿವಾಸ ಕಲವಲದೊಡ್ಡಿ, ಗೋಪಾಲ್, ಕೆ.ರಂಗನಾಥ ಪಾಲ್ಗೊಂಡಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News