ರಾಯಚೂರು | ನಾಗಮೋಹನದಾಸ್ ಆಯೋಗದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಪ್ರತಿನಿಧಿಗಳ ನೇಮಕಕ್ಕೆ ಒತ್ತಾಯಿಸಿ ಧರಣಿ
ರಾಯಚೂರು : ನಿವೃತ್ತ ನ್ಯಾಯಾಧೀಶ ಎಚ್.ಎನ್ ನಾಗಮೋಹನದಾಸ್ ಆಯೋಗದಲ್ಲಿ ಪರಿಶಿಷ್ಟ ಸಮುದಾಯದ ಪ್ರತಿನಿಧಿಯನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿ ಪರಿಶಿಷ್ಟ ಜಾತಿ ಸಮುದಾಯದ ಮುಖಂಡರು ಹಾಗೂ ಸದಸ್ಯರು ಸೋಮವಾರ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಧರಣಿ ನಡೆಸಿದರು.
ಈ ಬಗ್ಗೆ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಪರಿಶಿಷ್ಟ ಜಾತಿಯ ಮೀಸಲಾತಿ ವರ್ಗೀಕರಣ ಜಾರಿಗಾಗಿ ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿಯ ಸಮುದಾಯದಲ್ಲಿರುವ ಶೈಕ್ಷಣಿಕ ಮತ್ತು ಸರಕಾರಿ ನೌಕರಗಳ ದತ್ತಾಂಶವನ್ನು ಪಡೆಯಲು ನಿವೃತ್ತ ನ್ಯಾಯಾಧೀಶ ಎಚ್.ಎನ್.ನಾಗಮೋಹನ್ ದಾಸ್ ಅವರ ಆಯೋಗವನ್ನು ರಚನೆ ಮಾಡಲಾಗಿದೆ. ಈ ಆಯೋಗಕ್ಕೆ ಪರಿಶಿಷ್ಟ್ಟ ಜಾತಿಯ ತಲಾ ಒಂದು ಸಮುದಾಯದ ಪ್ರತಿನಿಧಿಯನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಎಸ್‌ಸಿ ಸಮುದಾಯದವರು ಶೈಕ್ಷಣಿಕ ಹಾಗೂ ಸರಕಾರಿ ನೌಕರರ ದತ್ತಾಂಶ ಪಡೆಯುವುದು ಅತಿ ಸೂಕ್ಷ್ಮದ ಸಂಗತಿಯಾಗಿದ್ದು, ಒಬಿಸಿ ವರ್ಗಕ್ಕೆ ಸೇರಿದ ನಾಗಮೋಹನ ದಾಸ್ ಅವರ ಆಯೋಗವು ಎಸ್‌ಸಿ ಸಮುದಾಯಕ್ಕೆ ನ್ಯಾಯ ಒದಗಿಸುತ್ತಾರೆ ಎನ್ನುವ ನಂಬಿಕೆ ನಮಗಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಪರಿಶಿಷ್ಟ್ಟ ಜಾತಿಯ ಮಾದಿಗ, ಹೊಲೆಯ, ಲಂಬಾಣಿ, ಭೋವಿ, ಕೊರಚ, ಕೊರಮ ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯದ ತಲಾ ಒಂದು ಪ್ರತಿನಿಧಿಯನ್ನು ನಿಯೋಗಕ್ಕೆ ಸದಸ್ಯರನ್ನಾಗಿ ನೇಮಕ ಮಾಡಬೇಕು. ಈ ನಿಟ್ಟಿನಲ್ಲಿ ಮಾದಿಗ ಸಮುದಾಯದಿಂದ ಹೇಮರಾಜ ಅಸ್ಕಿಹಾಳ ಅವರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ನೈಜ ಪರಿಶಿಷ್ಟ ಜಾತಿಯವರಿಗೆ ದೊರಕಬೇಕಾದ ಸರಕಾರಿ ನೌಕರಿಗಾಗಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸರಕಾರಿ ಸೇವೆಯನ್ನು ಮಾಡುತ್ತಿರುವವರನ್ನು ಗುರುತಿಸುವ ಕಾರ್ಯ ನಡೆಯಬೇಕು, ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ಸುಳ್ಳು ಜಾತಿ ಪ್ರಮಾಣ ಪತ್ರಗಳ ಪ್ರಕರಣಗಳ ಇತ್ಯಾರ್ಥಕ್ಕಾಗಿ ನ್ಯಾಯಾಲಯದಲ್ಲಿ ವಿಶೇಷ ಪೀಠವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಮುಖಂಡರಾದ ನರಸಿಂಹಲು ಪೋತಗಲ್, ಜಗ್ಲಿ ಉರುಕುಂದಪ್ಪ, ನರಸಿಂಹಲು ಮರ್ಚೆಟ್ಹಾಳ್, ಸುಶೀಲ್ ಕುಮಾರ, ತಾಯಪ್ಪ ಗಧಾರ್, ಪ್ರಭುರಾಜ, ಪಾಂಡು, ಆಕಾಶ ಮಾನ್ವಿ, ಎಂ.ಶರಣಬಸವ, ಮಹೇಂದ್ರಕುಮಾರ ಮಿತ್ರ ಪಾಲ್ಗೊಂಡಿದ್ದರು.