ಬಿಟ್ ಕಾಯಿನ್ ಹಗರಣ ಪ್ರಕರಣ: ವಿಚಾರಣೆಗೆ ಹಾಜರಾದ ಮುಹಮ್ಮದ್ ನಲಪಾಡ್
ಬೆಂಗಳೂರು: ಬಿಟ್ ಕಾಯಿನ್ ಹಗರಣ ಪ್ರಕರಣ ಸಂಬಂಧ ಎಸ್‍ಐಟಿ ಅಧಿಕಾರಿಗಳು ಕಾಂಗ್ರೆಸ್ ಯುವ ಮುಖಂಡ ಮುಹಮ್ಮದ್ ನಲಪಾಡ್ ಅವರನ್ನು ಬುಧವಾರ ವಿಚಾರಣೆಗೊಳಪಡಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಯಾನೆ ಶ್ರೀಕಿಯೊಂದಿಗೆ ನಂಟು ಹೊಂದಿದ್ದ ಆರೋಪದಡಿ ವಿಚಾರಣೆಗೆ ಹಾಜರಾಗುವಂತೆ ನಲಪಾಡ್‍ಗೆ ನೋಟಿಸ್ ನೀಡಲಾಗಿತ್ತು.
ಸಿಐಡಿಯ ಇ-ಪ್ರೊಕ್ಯೂರ್‍ಮೆಂಟ್ ಜಾಲತಾಣ ಹ್ಯಾಕ್ ಮಾಡಿ 1 ಕೋಟಿ ರೂಪಾಯಿ ವಂಚಿಸಿದ್ದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಐಪಿಎಸ್ ಅಧಿಕಾರಿ ವಂಶಿಕೃಷ್ಣ ಅವರ ಎದುರು ನಲಪಾಡ್ ಹಾಜರಾಗಿದ್ದಾರೆ.
2018ರಲ್ಲಿ ವಿದ್ವತ್ ಎಂಬಾತನ ಮೇಲೆ ಕೊಲೆಯತ್ನ ಪ್ರಕರಣದಲ್ಲಿ ನಲಪಾಡ್ ಜೊತೆಗೆ ಶ್ರೀಕಿ ಆರೋಪಿಯಾಗಿದ್ದ. ಇಬ್ಬರೂ ಪರಸ್ಪರ ಪರಿಚಯಸ್ಥರಾಗಿದ್ದು, ಇಬ್ಬರ ನಡುವೆ ಹಣಕಾಸು ವಹಿವಾಟು ನಡೆದಿತ್ತಾ? ಎಂಬ ಮಾಹಿತಿ ಸಂಗ್ರಹಿಸಲು ನಲಪಾಡ್ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಶ್ರೀಕಿ ಗೆಳತಿಯನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದರು. ಬಿಟ್ ಕಾಯಿನ್ ಪ್ರಕರಣದಲ್ಲಿ ಬಂಧಿತನಾಗಿದ್ದಾಗ ಶ್ರೀಕಿಗೆ ಇನ್‍ಸ್ಪೆಕ್ಟರ್ ಪ್ರಶಾಂತ್ ಬಾಬು ಲ್ಯಾಪ್‍ಟಾಪ್ ನೀಡಿದ್ದರು. ಈ ವೇಳೆ ಕೆಲಸದ ವಿಚಾರವಾಗಿ ಹೊರಹೋಗಿ, ಹಣ ಜಮೆ ಮಾಡು ಎಂದು ಗೆಳತಿಗೆ ಮೇಲ್ ಮಾಡಿದ ಶ್ರೀಕಿ ನಂತರ ಇಮೇಲ್ ಡಿಲೀಟ್ ಮಾಡುವಂತೆ ಸೂಚಿಸಿದ್ದ. ಇದರಂತೆ ಆಕೆ ಇಮೇಲ್ ಡಿಲೀಟ್ ಮಾಡಿದ್ದಳು. ಲ್ಯಾಪ್‍ಟಾಪ್ ಜಪ್ತಿ ಮಾಡಿ ಡೇಟಾ ರಿಟ್ರೀವ್ ಮಾಡಿದಾಗ ಶ್ರೀಕಿ ಇಮೇಲ್ ಮಾಡಿರುವುದು ಗೊತ್ತಾಗಿತ್ತು. ಈ ಸಂಬಂಧ ಯುವತಿಗೆ ನೋಟಿಸ್ ನೀಡಿ ವಿಚಾರಣೆಗೊಳಪಡಿಸಲಾಗಿತ್ತು.