ಜೆ.ಎಚ್.ಪಟೇಲರು ಹೇಳಿದ ಹೋರಿ ಮತ್ತು ನಾಯಿ ಕತೆ ಬಿಜೆಪಿ ನಾಯಕರು ಒಮ್ಮೆ ಕೇಳಿಸಿಕೊಳ್ಳಲಿ: ಡಿ.ಕೆ.ಶಿವಕುಮಾರ್

Update: 2023-10-18 15:41 GMT

ಬೆಳಗಾವಿ, ಅ.18: ಕಾಂಗ್ರೆಸ್ ಪಕ್ಷದಲ್ಲಿ ಯಾವುದೆ ಬಿರುಕಿಲ್ಲ. 136 ಶಾಸಕರೂ ನಮ್ಮವರೇ. ನಮ್ಮಲ್ಲಿ ಬಿರುಕಿದೆ ಎಂದು ಹೇಳುವ ಬಿಜೆಪಿ ನಾಯಕರು ಒಮ್ಮೆ ಜೆ.ಎಚ್.ಪಟೇಲರ ಭಾಷಣ ಕೇಳಿಸಿಕೊಳ್ಳಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

ಬುಧವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಳಗಾವಿಯ ಶಾಸಕರು, ಸಚಿವರು ನಿಮ್ಮನ್ನು ಸ್ವಾಗತಿಸಲು ಬರಲಿಲ್ಲ, ಸತೀಶ್ ಜಾರಕಿಹೊಳಿ ಅವರಿಗೂ ನಿಮಗೂ ಮುನಿಸಿದೆಯೆ? ಎನ್ನುವ ಪ್ರಶ್ನೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ನಿನ್ನೆ, ಮೊನ್ನೆ ಸತೀಶ್ ಜಾರಕಿಹೊಳಿ ಮತ್ತು ನಾನು ಜೊತೆಯಲ್ಲಿಯೆ ಕುಳಿತು ಮಾತನಾಡಿದ್ದೇವೆ. ನಾನು ಬಂದಿರುವುದು ಖಾಸಗಿ ಕಾರ್ಯಕ್ರಮಕ್ಕೆ. ಲಕ್ಷ್ಮಿ ಹೆಬ್ಬಾಳ್ಕರ್ ನಾಮಕರಣ ಕಾರ್ಯಕ್ರಮ ನಿಮಿತ್ತ ಭದ್ರಾವತಿಯಲ್ಲಿ ಇದ್ದಾರೆ. ಕೌಜಲಗಿ ಅವರಿಗೆ ಆರೋಗ್ಯ ಸರಿಯಿಲ್ಲ. ದಿಢೀರ್ ಎಂದು ನಿನ್ನೆ ರಾತ್ರಿ ಈ ಕಾರ್ಯಕ್ರಮ ನಿಗದಿಯಾದ ಕಾರಣಕ್ಕೆ ಬಂದಿದ್ದೇನೆ. ಎಲ್ಲರಿಗೂ ಅವರದೇ ಆದ ವೈಯಕ್ತಿಕ ಕೆಲಸಗಳು ಇರುತ್ತವೆ ಎಂದು ಅವರು ಹೇಳಿದರು.

ನಮ್ಮಲ್ಲಿ ಯಾರ ಬಗ್ಗೆಯೂ ಮುನಿಸಿಲ್ಲ. ಎಲ್ಲ ಶಾಸಕರು ನಮ್ಮವರೆ. ನಿಮಗೂ ಹಾಗೂ ಬಿಜೆಪಿಯವರಿಗೆ ಒಂದು ಸುದ್ದಿ ಬೇಕು, ಅದಕ್ಕೆ ಹೀಗೆಲ್ಲಾ ಹೇಳುತ್ತೀರಿ ಎಂದು ಮಾಧ್ಯಮದವರನ್ನು ಕಿಚಾಯಿಸಿದ ಅವರು, ಸತೀಶ್ ಅವರು ಶಾಸಕರ ಜೊತೆ ಪ್ರವಾಸ ಮಾಡುವ ವಿಚಾರವಾಗಿ ನಾವಿಬ್ಬರೂ ಚರ್ಚಿಸಿದೆವು ಎಂದು ಅವರು ತಿಳಿಸಿದರು.

ಬೆಳಗಾವಿಯಿಂದಲೆ ಕಾಂಗ್ರೆಸ್ ಬಂಡಾಯ ಆರಂಭ ಎಂದು ಬಿಜೆಪಿಯವರು ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜೆ.ಎಚ್.ಪಟೇಲರ ಸರಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆ ಆದಾಗ ಅವರು ಒಂದು ಭಾಷಣ ಮಾಡಿದ್ದರು. ಹೋರಿ ಮತ್ತು ನಾಯಿ ಕತೆ. ಅದನ್ನು ನೀವು ಕೇಳಿದ್ದೀರಾ? ಅದನ್ನು ಬಿಜೆಪಿಯವರಿಗೆ ಕೇಳಿಸಿಕೊಳ್ಳಲು ಹೇಳಿ ಎಂದು ತಿರುಗೇಟು ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News