ಮುಸ್ಲಿಂ ಸಮುದಾಯವನ್ನು ಅವಹೇಳಿಸುವಂತಹ ಕಾರ್ಟೂನ್ ವಿಡಿಯೋ ಹರಿಬಿಟ್ಟ ಬಿಜೆಪಿ: ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

Update: 2024-05-05 14:10 GMT

PC: X 

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯಲು ಕೆಲವೇ ದಿನಗಳು ಇರುವಾಗ ಕರ್ನಾಟಕ ಬಿಜೆಪಿ, ಮುಸ್ಲಿಮರು, ರಾಹುಲ್‍ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿ ಮಾಡಿ ಆ್ಯನಿಮೇಟೆಡ್ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಈ ವಿಡಿಯೊ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಮೇ 4ರಂದು ಬಿಜೆಪಿ ರಾಜ್ಯ ಘಟಕ ಪೋಸ್ಟ್ ಮಾಡಿದ ವಿಡಿಯೊ ಸಂಬಂಧ ಕರ್ನಾಟಕ ಕಾಂಗ್ರೆಸ್ ಸೋಮವಾರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ವಿಡಿಯೊವನ್ನು ಪೋಸ್ಟ್ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

17 ಸಕೆಂಡ್‍ಗಳ "ಎಚ್ಚರ..ಎಚ್ಚರ..ಎಚ್ಚರ..!" ಎಂಬ ಶೀರ್ಷಿಕೆಯ ಈ ಆ್ಯನಿಮೇಟೆಡ್ ವಿಡಿಯೊದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್‍ ಗಾಂಧಿ ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಂಗ್ಯಚಿತ್ರಗಳಿವೆ. ಈ ಇಬ್ಬರು ಮುಖಂಡರ ಜತೆಗೆ ಗೂಡಿನಲ್ಲಿ ಮುಸ್ಲಿಂ ಎಂದು ಬರೆದ ಒಂದು ಮೊಟ್ಟೆ ಇಡಲಾಗಿದೆ. ಇದರ ಪಕ್ಕ ಎಸ್ಸಿ, ಎಸ್ಟಿ ಮತ್ತು ಓಬಿಸಿ ಎಂದು ಬರೆದ ಮೂರು ಮೊಟ್ಟೆಗಳಿವೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪೋಸ್ಟ್ ಮಾಡಲ್ಪಟ್ಟ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಬಿಜೆಪಿ ವಿಡಿಯೊ ವಿರುದ್ಧ ಕರ್ನಾಟಕ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಈ ದೂರು ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಸಾಮಾಜಿಕ ಜಾಲತಾಣ ಮುಖ್ಯಸ್ಥ ಮಾಳವಿಯಾ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ದೂರು ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News