ಶೋಭಾ ಎಂಪಿಯಾಗಲು ಬೆಂಗಳೂರಿಗೆ ಬಂದರೋ? ಅಥವಾ ಬೆಂಕಿ ಹಚ್ಚಲೋ? : ಬಿಜೆಪಿ ಶಾಸಕ ಸೋಮಶೇಖರ್ ಪ್ರಶ್ನೆ

Update: 2024-03-21 15:41 GMT

ಬೆಂಗಳೂರು: ಶೋಭಾ ಕರಂದ್ಲಾಜೆ ಸಂಸದೆ ಆಗಲು ಬಂದಿದ್ದಾರಾ ಅಥವಾ ಬೆಂಗಳೂರಿಗೆ ಬೆಂಕಿ ಹಚ್ಚಲು ಬಂದಿದ್ದಾರೆಯೇ? ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಪ್ರಶ್ನೆ ಮಾಡಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಒಂದು ಶಾಂತಿಪ್ರಿಯ ನಗರ ಎನ್ನುವುದನ್ನು ಶೋಭಾ ಕರಂದ್ಲಾಜೆ ಮನಗಾಣಬೇಕು. ಅವರ ಹೇಳಿಕೆಗಳಿಂದಾಗಿ ಖುದ್ದು ನನಗೇ ನನ್ನ ಕ್ಷೇತ್ರದಲ್ಲಿ ವಾರದಿಂದೀಚೆಗೆ ಓಡಾಡಲು ಭಯವಾಗುತ್ತಿದೆ. ಯಾವ ಸಮಯದಲ್ಲಿ ಏನು ದ್ವೇಷ ಭಾಷಣ ಮಾಡುತ್ತಾರೋ, ಯಾವ ಸಮಯದಲ್ಲಿ ನನ್ನ ವಿರುದ್ಧ ಮಾತನಾಡುತ್ತಾರೋ, ಏನು ನಡೆಯಲಿದೆಯೋ ಎನ್ನುವ ಆತಂಕ ಶುರುವಾಗಿದೆ ಎಂದು ಹೇಳಿದರು.

ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಗೆ ನನ್ನ ಕ್ಷೇತ್ರ ಬರುತ್ತದೆ. ಡಿ.ಬಿ.ಚಂದ್ರೇಗೌಡ ಸಂಸದರಾಗಿದ್ದರು. ಡಿ.ವಿ.ಸದಾನಂದಗೌಡ ಅವರು 10 ವರ್ಷ ಸಂಸದರಾಗಿದ್ದರು. ಒಂದೇ ಒಂದು ಸಣ್ಣ ವ್ಯತ್ಯಾಸವೂ ಆಗಿರಲಿಲ್ಲ. ಆದರೆ, ಇದೀಗ ಯಶವಂತಪುರ ಕ್ಷೇತ್ರಕ್ಕೆ ಹೋಗುವುದಕ್ಕೆ ನಾನೇ ಭಯಪಡುತ್ತಿದ್ದೇನೆ. ಯಾರು ಏನು ಮಾತನಾಡ್ತಾರೋ, ಎತ್ತಿ ಕಟ್ಟುತ್ತಾರೆಂಬ ಭಯವಿದೆ ಎಂದು ತಿಳಿಸಿದರು.

ಮತ್ತೆ ಡಿಕೆಶಿ ಭೇಟಿ ಮಾಡಿದ ಉಭಯ ಶಾಸಕರು..!

ಲೋಕಸಭಾ ಚುನಾವಣೆ ಬೆನ್ನಲ್ಲೇ ಬಿಜೆಪಿಯ ಶಾಸಕರಾದ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ತಂತ್ರಗಾರಿಕೆ ನಡೆಯುತ್ತಿರುವ ಸಂದರ್ಭದಲ್ಲೇ ಈ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News