ನಕಲಿ ಮೈಸೂರ್ ಸ್ಯಾಂಡಲ್ ಸೋಪ್ ತಯಾರಕರ ಜತೆ ಬಿಜೆಪಿ ನಂಟು: ಸಚಿವ ಪ್ರಿಯಾಂಕ್ ಖರ್ಗೆ ಆರೋಪ

Update: 2024-01-17 12:42 GMT

ಬೆಂಗಳೂರು: ಹೈದರಾಬಾದ್‍ನಲ್ಲಿನ ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕರಿಗೂ ಬಿಜೆಪಿ ನಾಯಕರಿಗೂ ಅತ್ಯುತ್ತಮ ಒಡನಾಟವಿದ್ದು, ಈ ಅಕ್ರಮದಲ್ಲಿ ಬಿಜೆಪಿ ನಾಯಕರ ಪಾಲೆಷ್ಟು? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಪ್ರಕರಣದ ಸಂಬಂಧ ರಾಕೇಶ್ ಜೈನ್ ಹಾಗೂ ಮಹಾವೀರ್ ಜೈನ್ ಎಂಬ ಇಬ್ಬರು ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಾಗಿದೆ. ಇವರಿಬ್ಬರೂ ಪೊಲೀಸರ ವಶದಲ್ಲಿದ್ದಾರೆ ಎಂದರು.

ವಿಚಾರಣೆಯಲ್ಲಿ ಈ ಇಬ್ಬರು ವ್ಯಕ್ತಿಗಳು ಬಿಜೆಪಿಯ ಸಕ್ರಿಯ ಕಾರ್ಯಕರ್ತರು. ಇವರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ತೆಲಂಗಾಣ ಶಾಸಕ ರಾಜಾ ಸಿಂಗ್ ಅವರ ಒಡನಾಡಿಗಳಾಗಿರುವುದು ತಿಳಿದು ಬಂದಿದೆ. ಇಷ್ಟೆಲ್ಲಾ ಒಡನಾಟ ಇಟ್ಟುಕೊಂಡಿರುವವರ ಜತೆ ರಾಜ್ಯ ಬಿಜೆಪಿ ನಾಯಕರು ಸಂಪರ್ಕ ಹೊಂದಿರುವುದಿಲ್ಲವೇ? ಎಂದು ಅವರು ಪ್ರಶ್ನಿಸಿದರು.

ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್, ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರ ಪುತ್ರ ವಿಠಲ್ ನಾಯಕ್ ಜತೆ ಆರೋಪಿಗಳು ಒಡನಾಟ ಇಟ್ಟುಕೊಂಡಿದ್ದಾರೆ. ಸ್ಯಾಂಟ್ರೋ ರವಿ, ಸೈಲೆಂಟ್ ಸುನೀಲ್, ಫೈಟರ್ ರವಿ, ಪೃಥ್ವಿ ಸಿಂಗ್ ರಂತಹವರು ಬಿಜೆಪಿಯಲ್ಲೆ ಕಾಣಿಸಿಕೊಳ್ಳುತ್ತಿರುವುದೇಕೆ? ರಾಜ್ಯದ ಆಸ್ತಿ ಮಾರಲು ಹೊರಟವರಿಗೆ ಪಕ್ಷದ ಟಿಕೆಟ್ ನೀಡಿ, ಪದಾಧಿಕಾರಿ ಮಾಡುತ್ತೀರಾ? ನಿಮಗೆ ನಾಚಿಕೆ ಇದ್ದರೆ ಅವರನ್ನು ವಜಾ ಮಾಡುತ್ತಿದ್ದಿರಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಗರೀಬ್ ಕಲ್ಯಾಣ್ ಯೋಜನೆಯ 700 ಕ್ವಿಂಟಾಲ್ ಅಕ್ಕಿ ಇತ್ತೀಚೆಗೆ ಬಿಜೆಪಿ ನಾಯಕರ ಗೋದಾಮಿನಲ್ಲಿ ಸಿಕ್ಕಿದೆ. ಮೋದಿ ಅಕ್ಕಿ ಎಂದು ಬೀಗುವ ಬಿಜೆಪಿ ನಾಯಕರು ಅದನ್ನು ಕದ್ದು ಸಿಕ್ಕಿಬಿದ್ದ ನಂತರವೂ ಆತನನ್ನು ಪಕ್ಷದಿಂದ ಹೊರಹಾಕಿಲ್ಲ ಎಂದರೆ ನಿಮಗೂ ಇದರಲ್ಲಿ ಪಾಲಿದೆ ಎಂಬ ಅನುಮಾನ ವ್ಯಕ್ತವಾಗುತ್ತದೆ ಎಂದು ಅವರು ಹೇಳಿದರು.

ನಕಲಿ ಮೈಸೂರು ಸ್ಯಾಂಡಲ್ ಸೋಪು ಮಾರಿರುವ ಅಕ್ರಮದಲ್ಲಿ ನಿಮಗೆ ಎಷ್ಟು ಪಾಲು ಸಿಗುತ್ತಿದೆ? ಬಿಜೆಪಿ ಶಾಸಕರಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲಿ 7 ಕೋಟಿ ಹಣ ಸಿಕ್ಕಿತ್ತು. ಅವರು ಇದೇ ಸಂಸ್ಥೆಯ ಜವಾಬ್ದಾರಿ ಹೊತ್ತಿದ್ದರು. ಆ ಪ್ರಕರಣದಲ್ಲಿ ಅವರ ಹೆಸರನ್ನು ಕೈಬಿಡಲಾಗಿದ್ದರೂ ಅವರ ಪುತ್ರನ ಹೆಸರು ಹಾಗೇ ಇದೆ. ಈ ಅಕ್ರಮದಲ್ಲೂ ಅವರ ಕೈವಾಡ ಇಲ್ಲವೇ? ಈ ಬಗ್ಗೆ ತನಿಖೆಯಾಗಬೇಕಲ್ಲವೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರು ಈ ಬಗ್ಗೆ ಉತ್ತರ ನೀಡಬೇಕು. ಇವರನ್ನು ಕೂಡ ರಾಮಭಕ್ತರು ಎಂದು ಹೇಳಿ ಬೀದಿಗಿಳಿದು ಹೋರಾಟ ಮಾಡುತ್ತೀರಾ? ಅಥವಾ ಇವರನ್ನು ಪಕ್ಷದಿಂದ ವಜಾ ಮಾಡುತ್ತೀರಾ? ರಾಜ್ಯ ಬಿಜೆಪಿ ನಾಯಕರಿಗೂ ಈ ಅಕ್ರಮದಲ್ಲಿ ಪಾಲಿದೆ. ಇವರಿಗೆ ಹಣ ಬಂದರೆ ಸಾಕು ಯಾವುದಕ್ಕೂ ಹಿಂಜರಿಯುವುದಿಲ್ಲ. ರಾಜ್ಯದ ಗೌರವವನ್ನು ಈ ರೀತಿ ಮಾರಾಟ ಮಾಡುತ್ತಾರೆ ಎಂದು ಭಾವಿಸಿರಲಿಲ್ಲ ಎಂದು ಅವರು ಟೀಕಿಸಿದರು.

ನಮ್ಮ ಸರಕಾರ ಈ ವಿಚಾರದಲ್ಲಿ ಎಚ್ಚೆತ್ತು ಎಫ್‍ಐಆರ್ ದಾಖಲಿಸಿದೆ. ನಮ್ಮ ಅಧಿಕಾರಿಗಳು ಹೈದರಾಬಾದ್ ನಲ್ಲಿದ್ದು, ತೆಲಂಗಾಣ ಉಪಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ತನಿಖೆಗೆ ಸಹಕಾರ ನೀಡುವಂತೆ ಕೋರಿದ್ದೇವೆ. ಈ ವಿಚಾರವಾಗಿ ಎಂ.ಬಿ.ಪಾಟೀಲ್ ಅವರಿಗೂ ತಿಳಿಸಿದ್ದೇನೆ. ಅವರು ದಾವೋಸ್ ನಲ್ಲಿರುವ ಕಾರಣ ಈ ವಿಚಾರವಾಗಿ ನಾನು ಮಾಧ್ಯಮಗೋಷ್ಠಿ ಮೂಲಕ ತಿಳಿಸುತ್ತಿದ್ದೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಬಿಜೆಪಿ ಸರಕಾರದ ಅವಧಿಯಲ್ಲಿ ನಾವು ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ತನಿಖಾ ಸಮಿತಿಗಳನ್ನು ನೇಮಕ ಮಾಡಿದ್ದೇವೆ. ಅವರು ಮೂರೂವರೆ ವರ್ಷಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಕೆಲವು ಪ್ರಕರಣಗಳ ತನಿಖೆ ಬಹುತೇಕ ಅಂತ್ಯವಾಗಿದ್ದು, ಅದು ಪೂರ್ಣಗೊಂಡ ನಂತರ ಮಾಹಿತಿ ಬಹಿರಂಗಪಡಿಸುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News