ತುಮಕೂರು ಉಪನಗರ ಯೋಜನೆ | ಪಿಯೂಷ್ ಗೋಯಲ್‌ಗೆ ತಿರುಗೇಟು ನೀಡಿದ ಸಚಿವ ಎಂ.ಬಿ.ಪಾಟೀಲ್

Update: 2024-09-19 19:28 GMT

ಪಿಯೂಷ್ ಗೋಯಲ್(PTI)/ಎಂ.ಬಿ.ಪಾಟೀಲ್

ಬೆಂಗಳೂರು: ತುಮಕೂರು ಉಪನಗರ ಯೋಜನೆ ಹಿನ್ನಡೆ ಅನುಭವಿಸಲು ರಾಜ್ಯ ಸರಕಾರ ಕಾರಣ ಎಂದು ಆರೋಪಿಸಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಗೆ ತಿರುಗೇಟು ನೀಡಿರುವ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ತುಮಕೂರು (ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್) ಉಪನಗರ ಯೋಜನೆಯ ಪ್ರಕಟಣೆ ಕೇವಲ ಕಾಗದದ ಮೇಲೆ ಉಳಿದಿದೆಯೇ ಹೊರತು ಯಾವುದೇ ಭೌತಿಕ ಪ್ರಗತಿಯಾಗಿಲ್ಲ ಎಂದು ಪ್ರತ್ಯಾರೋಪ ಮಾಡಿದ್ದಾರೆ.

 "ಪಿಯೂಷ್ ಗೋಯಲ್ ಅವರೇ, ರೋಮ್ ನಗರವನ್ನು ಒಂದೇ ದಿನದಲ್ಲಿ ನಿರ್ಮಾಣ ಮಾಡಲಿಲ್ಲ. ಆದರೆ, ಸ್ಮಾರ್ಟ್ ಸಿಟಿ ಯೋಜನೆಯಂತಲ್ಲದೆ ರೋಮ್ ನಗರವನ್ನು ವಾಸ್ತವವಾಗಿ ನಿರ್ಮಿಸಲಾಯಿತು. ನಿಮ್ಮ ಸ್ಮಾರ್ಟ್ ಸಿಟಿ ಎಂದು ಹೇಳಲಾಗುವ ದೂರದೃಷ್ಟಿಯು ದಯನೀಯವಾಗಿ ವೈಫಲ್ಯಗೊಂಡಿದೆ” ಎಂದು ಎಂ.ಬಿ.ಪಾಟೀಲ್ ಕುಟುಕಿದ್ದಾರೆ.

“ತುಮಕೂರು (ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್) ಉಪ ನಗರ ಯೋಜನೆಯ ಪ್ರಕಟಣೆಯು ಕೇವಲ ಕಾಗದದ ಮೇಲಷ್ಟೇ ಉಳಿದಿದೆಯೇ ಹೊರತು, ಭೂಸ್ವಾಧೀನವಾಗಲಿ ಅಥವಾ ಭೌತಿಕ ಪ್ರಗತಿಯಾಗಲಿ ಆಗಿಲ್ಲ. ಪ್ರಧಾನಿಯವರು ಈ ಯೋಜನೆಗೆ ಫೆಬ್ರವರಿ 1, 2023ರಂದು ಕೇವಲ ಪ್ರದರ್ಶನಕ್ಕಾಗಿ ಅಡಿಗಲ್ಲು ಹಾಕಿದರು. ಆದರೆ, ನಮ್ಮ ಸರಕಾರ ಅಧಿಕಾರಕ್ಕೆ ಬರುವವರೆಗೂ ಕೇವಲ ಒಂದು ಎಕರೆಯಷ್ಟೂ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿರಲಿಲ್ಲ. ಈ ಯೋಜನೆಗೆ ಅಗತ್ಯವಿರುವ 1,700 ಚಿಲ್ಲರೆ ಎಕರೆ ಭೂಮಿಯ ಪೈಕಿ ಇಲ್ಲಿಯವರೆಗೆ ನಮ್ಮ ಸರಕಾರವು ಶೇ.80ರಷ್ಟು ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ (1,450+ ಎಕರೆ) ಹಾಗೂ ಯೋಜನೆಯು ತ್ವರಿತ ಗತಿಯಲ್ಲಿ ಪ್ರಗತಿಯಾಗುತ್ತಿದೆ. ಈಗಾಗಲೇ 250 ಎಕರೆಯಷ್ಟು ರಾಜ್ಯ ಸರಕಾರದ ಭೂಮಿಯಿದ್ದು, ಉಳಿದ ಭೂಸ್ವಾಧೀನವನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು. ನಾವು ಕೇವಲ ಮಾತನಾಡುವುದಿಲ್ಲ, ಕಾರ್ಯಗತಗೊಳಿಸುತ್ತೇವೆ” ಎಂದು ಅವರು ತಿರುಗೇಟು ನೀಡಿದ್ದಾರೆ.

ಬೆಂಗಳೂರಿನ ಅವ್ಯವಸ್ಥೆಗೂ ಈ ಹಿಂದೆ ಇದ್ದ ಬಿಜೆಪಿ ಸರಕಾರವೇ ಕಾರಣ ಎಂದು ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News