ಎಸ್‍ಸಿ-ಎಸ್‍ಟಿ ಅಭಿವೃದ್ಧಿಗೆ ಹಣ ವಾಪಸ್ ಕೊಡಿ : ಛಲವಾದಿ ನಾರಾಯಣಸ್ವಾಮಿ

Update: 2024-09-19 15:12 GMT

ಛಲವಾದಿ ನಾರಾಯಣಸ್ವಾಮಿ 

ವಿಜಯನಗರ : ಅಭಿವೃದ್ಧಿ ವಿಚಾರವನ್ನು ಸಂಪೂರ್ಣ ಕಡೆಗಣಿಸಿದ ಕಾಂಗ್ರೆಸ್ ರಾಜ್ಯ ಸರಕಾರವು ದಲಿತರನ್ನೂ ವಂಚಿಸಿದೆ. ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿದ್ದು, ಆ ಹಣವನ್ನು ಕೂಡಲೇ ವಾಪಸ್ ಕೊಡಬೇಕು ಎಂದು ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಗುರುವಾರ ಇಲ್ಲಿನ ಹೊಸಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕೇವಲ ಗ್ಯಾರಂಟಿಗಳು ಎಂದು ಹೇಳಿಕೊಂಡು, ಅದನ್ನೂ ಸರಿಯಾಗಿ ಜನರಿಗೆ ತಲುಪಿಸದೆ ವಂಚನೆ ಮಾಡಿದೆ. ಪರಿಶಿಷ್ಟ ಜಾತಿ-ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟ 25 ಸಾವಿರ ಕೋಟಿ ರೂ.ಹಣವನ್ನು ಈಗಾಗಲೇ ಬೇರೆಬೇರೆ ಕಾರ್ಯಗಳಿಗೆ ಉಪಯೋಗ ಮಾಡಿದ್ದಾರೆ. ಈ ಮೂಲಕ ದಲಿತರನ್ನೂ ವಂಚನೆ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಪರಿಶಿಷ್ಟ ಜಾತಿ- ವರ್ಗಗಳ ಶ್ರೇಯೋಭಿವೃದ್ಧಿಗೆ ಇಟ್ಟಿರುವ ಹಣವನ್ನು ಬೇರೆ ವಿಚಾರಗಳಿಗೆ ಪೋಲು ಮಾಡಬಾರದೆಂಬುದು ನಮ್ಮ ಉದ್ದೇಶವಾಗಿತ್ತು. ಆದರೆ, ಖಜಾನೆಯಲ್ಲಿ ಹಣ ಖಾಲಿ ಇರುವ ಕಾರಣ ದಾರಿ ತಪ್ಪಿಸಿ ಈ ಪರಿಶಿಷ್ಟ ಜಾತಿ-ವರ್ಗಗಳ ಹಣವನ್ನು ತೆಗೆದು ಬೇರೆಬೇರೆ ಕಾರ್ಯಗಳಿಗೆ ಉಪಯೋಗಿಸಿ ಅವರಿಗೆ ಅನ್ಯಾಯ ಮಾಡಲಾಗುತ್ತಿತ್ತು ಎಂದು ಅವರು ಟೀಕಿಸಿದರು.

ಸದಸ್ಯತ್ವ ನೋಂದಣಿ ಸಂಬಂಧ ಬೀದರ್, ಕಲಬುರ್ಗಿ ಮತ್ತಿತರ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಪ್ರವಾಸ ಮಾಡಿದ್ದೇನೆ. ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಬಿಜೆಪಿ ಅತಿದೊಡ್ಡ ರಾಜಕೀಯ ಪಕ್ಷ ಎನಿಸಿದೆ. 11 ವರ್ಷಗಳ ಕಾಲ ಮೋದಿ ನೇತೃತ್ವದಲ್ಲಿ ನಿಷ್ಕಳಂಕ ರಾಜಕಾರಣವನ್ನು ಮಾಡುತ್ತ ಬಂದಿದ್ದೇವೆ. ರಾಜ್ಯದಲ್ಲಿ 1.80 ಕೋಟಿ ಸದಸ್ಯರನ್ನು ನೋಂದಣಿ ಮಾಡಲು ಪಕ್ಷ ತೀರ್ಮಾನ ಮಾಡಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News