ಬಿಜೆಪಿಯಲ್ಲಿ ಮುಂದುವರಿದ ಆಂತರಿಕ ಕಚ್ಚಾಟ: ಪಕ್ಷದ ಘನತೆಗೆ ಧಕ್ಕೆ ತರದಂತೆ ನಳಿನ್ ಕುಮಾರ್ ಕಟೀಲ್ ಸೂಚನೆ
ಬೆಂಗಳೂರು, ಜೂ.27: ವಿಧಾನಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ ಪಾಳಯದಲ್ಲಿ ಆಂತರಿಕ ಕಚ್ಚಾಟ ತಾರಕಕ್ಕೇರಿದೆ. ನೂತನ ವಿಧಾನಸಭೆ ಅಸ್ತಿತ್ವಕ್ಕೆ ಬಂದು ಒಂದು ತಿಂಗಳಾದರೂ ಈವರೆಗೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಅರ್ಹ ಅಭ್ಯರ್ಥಿಯನ್ನು ಹುಡುಕಲು ಸಾಧ್ಯವಾಗದ ಪರಿಸ್ಥಿತಿಗೆ ಬಿಜೆಪಿ ತಲುಪಿದೆ.
ಕಾಂಗ್ರೆಸ್ ಪಕ್ಷದಲ್ಲಿದ್ದ ಶಾಸಕರನ್ನು ಬಿಜೆಪಿಗೆ ಕರೆ ತಂದ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಅಶಿಸ್ತು ಮೂಡಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನೀಡಿದ ಹೇಳಿಕೆಗೆ ಇಂದು ಬೆಂಗಳೂರಿನಲ್ಲಿ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಪಕ್ಷಾಂತರಿಗಳಿಂದ ಬಿಜೆಪಿಯಲ್ಲಿ ಅಶಿಸ್ತು ಮೂಡಿದೆ ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ. ನಮ್ಮ ಮನೆಗೆ ಬಂದ ಸೊಸೆಯನ್ನು ಮನೆಯವರಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ವಿಧಾನಸಭೆ ಚುನಾವಣೆಯ ಫಲಿತಾಂಶ ನಮ್ಮ ನಿರೀಕ್ಷೆಗೆ ತಕ್ಕಂತೆ ಬಂದಿಲ್ಲ ಎಂಬ ನೋವಿದೆ. ಆದರೆ, ಈ ವಿಚಾರಗಳನ್ನೆಲ್ಲ ಬಹಿರಂಗವಾಗಿ ಮಾತನಾಡುವ ಅಗತ್ಯವಿಲ್ಲ. ಪಕ್ಷದ ವೇದಿಕೆಯಲ್ಲಿ ಮತ್ತ್ತಷ್ಟು ಗೌಪ್ಯವಾಗಿ ಚರ್ಚೆಗಳು ಆಗಬೇಕಿದೆ ಎಂದು ಹೇಳಿರುವ ಸದಾನಂದಗೌಡ, ಕಾಂಗ್ರೆಸ್-ಜೆಡಿಎಸ್ ನಡುವಿನ ಹೊಂದಾಣಿಕೆ ರಾಜಕಾರಣದಿಂದ ನಾವು ಹಿನ್ನಡೆ ಅನುಭವಿಸಬೇಕಾಯಿತು ಎಂದು ಅವರು ದೂರಿದ್ದಾರೆ.
ಹಾಸನ, ಚಿಕ್ಕಮಗಳೂರು ಸೇರಿದಂತೆ ಇನ್ನಿತರೆಡೆ ವೈಯಕ್ತಿಕ ದ್ವೇಷದಿಂದ ಆಗಿರುವ ಒಳ ಒಪ್ಪಂದದಿಂದ ನಾವು ಸೋತಿದ್ದೇವೆ. ಒಳ ಒಪ್ಪಂದ ಮಾಡಿಕೊಂಡಿರುವವರ ಬಗ್ಗೆ ಜಿಲ್ಲಾವಾರು ನಡೆಯುತ್ತಿರುವ ಅವಲೋಕನಾ ಸಭೆಗಳಿಂದ ಮಾಹಿತಿ ದೊರೆಯುತ್ತಿದ್ದು, ಪಕ್ಷ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದು ಸದಾನಂದಗೌಡ ಹೇಳಿದ್ದಾರೆ.
ಮತ್ತೊಂದೆಡೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಪರಸ್ಪರ ಬಹಿರಂಗವಾಗಿಯೆ ಕೆಸರೆರೆಚಾಟದಲ್ಲಿ ತೊಡಗಿರುವುದು ಬಿಜೆಪಿ ಪಾಳಯವನ್ನು ಕಂಗೆಡಿಸಿದೆ. ಇದೀಗ, ಮಾಜಿ ಸಚಿವ ರೇಣುಕಾಚಾರ್ಯ ಸಹ ಪಕ್ಷದ ನಾಯಕತ್ವದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಹೊನ್ನಾಳಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೇಣುಕಾಚಾರ್ಯ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು, ಗುಜರಾತ್ ಮಾದರಿ ಎಂದು ಹೇಳಿಕೊಂಡು ಹಿರಿಯರಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಕೆ.ಎಸ್.ಈಶ್ವರಪ್ಪಗೆ ಟಿಕೆಟ್ ನಿರಾಕರಿಸಿದ್ದು, ಡಾ.ಕೆ.ಸುಧಾಕರ್‍ಗೆ ಪ್ರಣಾಳಿಕೆ ತಯಾರಿಕಾ ಸಮಿತಿಯ ಜವಾಬ್ದಾರಿ ವಹಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅನಗತ್ಯ ಹೇಳಿಕೆಗಳಿಂದ ನಾವು ಸೋಲಬೇಕಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣೆಯನ್ನು ಗೆಲ್ಲಬೇಕೆಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯನ್ನು ರಾಜ್ಯದ ಮೂಲೆ ಮೂಲೆಯಲ್ಲಿ ಓಡಾಡಿಸಿದ್ದು ಎಷ್ಟರ ಮಟ್ಟಿಗೆ ಸರಿ. ಒಳ ಮೀಸಲಾತಿ ವಿಚಾರದಲ್ಲಿ ಕೈ ಹಾಕಬೇಡಿ ಎಂದು ಎಷ್ಟು ಹೇಳಿದರೂ ನಮ್ಮ ಮಾತನ್ನು ಯಾರೊಬ್ಬರೂ ಕೇಳಿಲ್ಲ. ಸರಕಾರದ ತಪ್ಪು ನಿರ್ಧಾರಗಳ ಪರಿಣಾಮ ಈಗ ಎದುರಿಸುತ್ತಿದ್ದೇವೆ ಎಂದು ಅವರು ಕಿಡಿಗಾರಿದ್ದಾರೆ.
ಪಕ್ಷದ ಘನತೆಗೆ ಧಕ್ಕೆ ತರಬೇಡಿ: ವಿಧಾನಸಭೆ ವಿರೋಧ ಪಕ್ಷದ ನಾಯಕನ ಸ್ಥಾನ, ಪಕ್ಷದ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ನೇಮಕ ಕುರಿತು ಪಕ್ಷದ ನಾಯಕರು ಹೇಳಿಕೆಗಳನ್ನು ನೀಡಿ ಪಕ್ಷದ ಘನತೆಗೆ ಧಕ್ಕೆ ತರಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಸೂಚಿಸಿದ್ದಾರೆ.
ವಿಪಕ್ಷ ನಾಯಕನ ಸ್ಥಾನ ಮತ್ತಿತರ ಹುದ್ದೆಗೆ ಸಂಬಂಧಿಸಿ ಪಕ್ಷದ ಕೇಂದ್ರ ಸಂಸದೀಯ ಮಂಡಳಿಯು ಸೂಕ್ತ ಸಮಯದಲ್ಲಿ ಸಮರ್ಥ ನಿರ್ಧಾರವನ್ನು ಪ್ರಕಟಿಸಲಿದೆ. ಪಕ್ಷದ ಕೆಲವು ನಾಯಕರು ಈ ನಡುವೆ ಮಾಧ್ಯಮಗಳ ಮುಂದೆ ವಿವಿಧ ಹುದ್ದೆ ಕುರಿತು ಆಕಾಂಕ್ಷೆ ವ್ಯಕ್ತಪಡಿಸುವುದು ಗಮನಕ್ಕೆ ಬಂದಿದೆ. ಅಲ್ಲದೆ, ಪಕ್ಷದ ಸಭೆಗಳಲ್ಲಿ ಈ ವಿಷಯವಾಗಿ ಚರ್ಚಿಸುತ್ತಿರುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.
ಪಕ್ಷದ ಘನತೆಗೆ ಧಕ್ಕೆ ಉಂಟಾಗದಂತೆ ನಾಯಕರು ನೋಡಿಕೊಳ್ಳಬೇಕು. ಪಕ್ಷದ ಆಂತರಿಕ ವಿಚಾರಗಳನ್ನು ಮಾಧ್ಯಮಗಳ ಮುಂದೆ ಚರ್ಚಿಸುವುದು ಸೂಕ್ತವಲ್ಲ ಎಂದು ನಳಿನ್ ಕುಮಾರ್ ಕಟೀಲ್ ಸೂಚಿಸಿದ್ದಾರೆ.