ಬಿಜೆಪಿ ಪೂರ್ಣ ರೂಪ 'ಬೊಗಳೆ ಜನತಾ ಪಾರ್ಟಿ' ಎಂದಾಗಬೇಕು: ಸಿದ್ದರಾಮಯ್ಯ

Update: 2023-12-17 10:10 GMT

ಸಿದ್ದರಾಮಯ್ಯ 

ಬೆಂಗಳೂರು: ಅಶ್ವಥ್ ನಾರಾಯಣ್, ಸಿ.ಟಿ.ರವಿ ಮತ್ತು ಇತರ ಕೆಲವು ಬಿಜೆಪಿ ನಾಯಕರು ನನ್ನ ಬಗ್ಗೆ ತಪ್ಪು ಮಾಹಿತಿ ಹರಡಲು ತೊಡಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

2023 ರಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಕಾಂಗ್ರೆಸ್‌ನ ಅಸಮರ್ಥತೆಯನ್ನು ಒಪ್ಪಿಕೊಂಡಿದ್ದೇನೆ ಎಂದು ನನ್ನ ಹೇಳಿಕೆಗಳನ್ನು ತಿರುಚಿ ಎಡಿಟ್‌ ಮಾಡಿದ ವೀಡಿಯೊವನ್ನು ಪ್ರಸಾರ ಮಾಡುವ ವಂಚನೆಯ ತಂತ್ರವನ್ನು ಬಿಜೆಪಿ ನಾಯಕರು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಆದರೆ, ಎಡಿಟ್‌ ಮಾಡದ ವೀಡಿಯೊವು ವಿಧಾನಸಭೆಯಲ್ಲಿನ ನನ್ನ ಹೇಳಿಕೆಗಳನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಬಿಜೆಪಿಯು ತನ್ನ 2018 ರ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು, ವಿಶೇಷವಾಗಿ ಸಾಲ ಮನ್ನಾ ಭರವಸೆಯನ್ನು ಈಡೇರಿಸಲು ವಿಫಲವಾಗಿತ್ತು. ಯಡಿಯೂರಪ್ಪ ಅವರು 2009 ರಲ್ಲಿ ತಮ್ಮ ಬಳಿ ನೋಟು ಮುದ್ರಿಸಲು ಮುದ್ರಣ ಯಂತ್ರವಿಲ್ಲ, ಕೃಷಿ ಸಾಲ ಮನ್ನಾ ಮಾಡಲು ಹಣದ ಕೊರತೆಯಿದೆ ಎಂದು ಹೇಳಿಕೆ ನೀಡಿದ್ದರು. ಚುನಾವಣೆ ವೇಳೆ ನೀಡಿದ ಭರವಸೆಗಳನ್ನು ಈಡೇರಿಸಲು ಬಿಜೆಪಿಯಿಂದ ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಒಪ್ಪಿಕೊಂಡಿದ್ದರು. ವಾಸ್ತವ ಏನೆಂದರೆ 2008ರಲ್ಲಿ ಅಥವಾ 2018ರಲ್ಲಿ ನೀಡಿದ ಭರವಸೆಗಳನ್ನು ಬಿಜೆಪಿ ಈಡೇರಿಸಿಲ್ಲ. 2018ರಲ್ಲಿ ನೀಡಿದ ಶೇ.90ಕ್ಕಿಂತ ಹೆಚ್ಚು ಭರವಸೆಗಳನ್ನು ಈಡೇರಿಸಿಲ್ಲ. ಇದು ಅವರ ಮಾತಿನ ಬದ್ಧತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಅವರು ದ್ರೋಹಿಗಳು ಮತ್ತು ಮೋಸಗಾರರು ಎಂದು ಸಿದ್ದರಾಮಯ್ಯ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆದರೆ, ನಾವು ಯಾವಾಗಲೂ ಭರವಸೆ ನೀಡಿದಂತೆ ಕೆಲಸ ಮಾಡಿದ್ದೇವೆ. 2013ರಲ್ಲಿ ನೀಡಿದ್ದ 165 ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಈಗ ಸರ್ಕಾರ ರಚನೆಯಾದ ಮೊದಲ ವಾರದಲ್ಲಿಯೇ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದ್ದೇವೆ. ಪ್ರಣಾಳಿಕೆಯ ಇತರ ಭರವಸೆಗಳನ್ನು ಈಡೇರಿಸುವ ಪ್ರಕ್ರಿಯೆಯಲ್ಲಿದ್ದೇವೆ. ನಮ್ಮ ಭರವಸೆಗಳಿಗೆ ನಾವು ಬದ್ಧರಾಗಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮಾಹಿತಿಯ ಸತ್ಯಾಸತ್ಯತೆಯನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಲು ಮತ್ತು ಎಡಿಟೆಡ್‌ ವಿಡಿಯೋ ಮೂಲಕ ತಪ್ಪುದಾರಿಗೆಳೆಯುವ ಪ್ರಯತ್ನಗಳನ್ನು ತಿರಸ್ಕರಿಸಲು ನಾವು ಸಾರ್ವಜನಿಕರನ್ನು ಒತ್ತಾಯಿಸುತ್ತೇವೆ ಎಂದು ಹೇಳಿದ ಸಿದ್ದರಾಮಯ್ಯ, ಮೋಸಗೊಳಿಸುವ ತಂತ್ರಗಳನ್ನು ಆಶ್ರಯಿಸುವುದಕ್ಕಿಂತ ಹೆಚ್ಚಾಗಿ ತಮ್ಮ ಕಾರ್ಯಗಳು ಮತ್ತು ಬದ್ಧತೆಗಳಿಗೆ ರಾಜಕೀಯ ಪಕ್ಷಗಳನ್ನು ಹೊಣೆಗಾರರನ್ನಾಗಿ ಮಾಡುವತ್ತ ಗಮನಹರಿಸಬೇಕು ಎಂದು ಹೇಳಿದ್ದಾರೆ.

ಬಿಜೆಪಿಯು ಸುಳ್ಳು ಸುದ್ದಿಗಳನ್ನು ಹರಡಲು ಹೆಸರುವಾಸಿಯಾಗಿದೆ , ಅದರ ಹೆಸರಿನ ಪೂರ್ಣ ರೂಪ 'ಬೊಗಳೆ ಜನತಾ ಪಾರ್ಟಿ' ಎಂದಾಗಬೇಕು. ಅವರ ಸಂಪೂರ್ಣ ಯಂತ್ರವು ನಕಲಿ ಸುದ್ದಿಗಳನ್ನು ಹರಡಲು ಕೆಲಸ ಮಾಡುತ್ತದೆ ಎಂಬುದು ಈಗ ಸ್ಪಷ್ಟವಾಗಿದೆ. ನರೇಂದ್ರ ಮೋದಿಯಿಂದ ಹಿಡಿದು ಸಿ.ಟಿ.ರವಿವರೆಗೆ ಅವರ ಅಜೆಂಡಾ ಫೇಕ್ ನ್ಯೂಸ್ ಮೂಲಕ ದಿಕ್ಕು ತಪ್ಪಿಸುವುದಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News