ಬಿಜೆಪಿ ನೀರು ರಾಜಕೀಯ ಬಿಟ್ಟು ಕೇಂದ್ರದಿಂದ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿ: ಡಿಸಿಎಂ ಡಿ.ಕೆ ಶಿವಕುಮಾರ್

Update: 2024-03-14 09:29 GMT

Photo: fb.com/dkshivakumar

ಬೆಂಗಳೂರು, ಮಾರ್ಚ್ 14: “ಬರ ಪರಿಸ್ಥಿತಿಯನ್ನು ಸರ್ಕಾರ ಯಶಸ್ವಿಯಾಗಿ ನಿಭಾಯಿಸುತ್ತಿರುವುದನ್ನು ಸಹಿಸಲಾಗದೇ ಬಿಜೆಪಿ ಸುಳ್ಳು ಪ್ರಚಾರಕ್ಕೆ ಮುಂದಾಗಿದೆ. ನೀರಿನ ವಿಚಾರದಲ್ಲಿ ರಾಜಕೀಯ ಮಾಡೋದು ಬಿಟ್ಟು ಕೇಂದ್ರ ಸರ್ಕಾರದಿಂದ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.

ಗುರುವಾರ ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ  ಪ್ರತಿಕ್ರಿಯೆ ನೀಡಿದ ಅವರು, “ಕಾವೇರಿ ನೀರು ಪೂರೈಕೆ ಪ್ರದೇಶಗಳಲ್ಲಿ ನೀರಿನ ಅಭಾವವಿಲ್ಲ. ಕೊಳವೆ ಬಾವಿಗಳು ಬತ್ತಿರುವ ಕಡೆಗಳಲ್ಲಿ ಮಾತ್ರ ಅಭಾವ ಹೆಚ್ಚಾಗಿದೆ. ಆದರೆ ಈ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ ಎಂಬುದು ಸುಳ್ಳು. ನಮ್ಮಲ್ಲಿ ನೀರೇ ಇಲ್ಲದಿರುವಾಗ ತಮಿಳುನಾಡಿಗೆ ಎಲ್ಲಿಂದ ನೀರು ಬಿಡಲು ಸಾಧ್ಯ? ಮೇಲಾಗಿ ಅವರು ನೀರು ಕೇಳಿಯೇ ಇಲ್ಲ. ಬಿಜೆಪಿಯದು ಕೇವಲ ರಾಜಕೀಯ ಗಿಮಿಕ್. ರಾಜ್ಯ ಬಿಜೆಪಿ ನಾಯಕರು ರಾಜಕೀಯ ಬಿಟ್ಟು ಮೇಕೆದಾಟು ಯೋಜನೆಗೆ ಕೇಂದ್ರ ಬಿಜೆಪಿ ಸರ್ಕಾರದಿಂದ ಅನುಮತಿ ಕೊಡಿಸಲಿ” ಎಂದರು.

“ಸರ್ಕಾರದ ಯಶಸ್ಸು ನೋಡಿ ಸಹಿಸಲಾಗದೇ ವಿರೋಧ ಪಕ್ಷಗಳು ಸುಳ್ಳು ಪ್ರಚಾರ ಮಾಡುತ್ತಿವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ತಮಿಳುನಾಡಿಗೂ ಕಾವೇರಿ ನೀರಿಗೂ ಏನು ಸಂಬಂಧ? ತಮಿಳುನಾಡಿನವರು ನೀರು ಬಿಡಿ ಎಂದು ಕೇಳಿದ್ದಾರಾ? ಕೇಳದಿದ್ದರೂ ನೀರು ಬಿಡಲು ನಮಗೆ ತಲೆ ಕೆಟ್ಟಿದೆಯಾ? ಬೆಂಗಳೂರಿಗೆ ಕುಡಿಯಲು ನೀರನ್ನು ಸಮರ್ಪಕವಾಗಿ ಪೂರೈಸಲು ನೀರು ಹರಿಸಲಾಗಿದೆ. ಬರ ಪರಿಸ್ಥಿತಿಯನ್ನು ಸರ್ಕಾರ ಯಶಸ್ವಿಯಾಗಿ ನಿಭಾಯಿಸುತ್ತಿದೆಯಲ್ಲ ಎಂಬ ಅಸೂಯೆಯಿಂದ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಅವರದ್ದು ಕೇವಲ ರಾಜಕಾರಣ” ಎಂದು ಹೇಳಿದರು.

ಸಂಸ್ಕರಿಸಿದ ನೀರಿನ ಪೂರೈಕೆಗೆ ಜನ ಮುಂದೆ ಬರುತ್ತಿದ್ದಾರಾ ಎಂದು ಕೇಳಿದಾಗ, “ಖಂಡಿತವಾಗಿಯೂ ಜನ ಇದಕ್ಕೆ ಮುಂದೆ ಬಂದಿದ್ದಾರೆ. ಉದ್ಯಾನವನ, ಕೈಗಾರಿಕೆಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಈ ನೀರನ್ನು ನೀಡಲಾಗುತ್ತಿದೆ” ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಾ. ಮಂಜುನಾಥ್ ಅವರ ಸ್ಪರ್ಧೆ ವಿಚಾರವಾಗಿ ಕೇಳಿದಾಗ, “ನಾವು ಮಂಜುನಾಥ್ ಅವರನ್ನು ಗೌರವಿಸುತ್ತೇವೆ. ಅವರು ಉತ್ತಮ ವೈದ್ಯರು. ಅವರಿಗೆ ನಾವು ಬೆಂಬಲ ನೀಡಿದ್ದೆವು. ಆದರೆ ರಾಜಕೀಯವೇ ಬೇರೆ. ನನ್ನ ಸಹೋದರ ಈ ಕ್ಷೇತ್ರದಲ್ಲಿ ಸಂಸದನ ರೀತಿ ಕೆಲಸ ಮಾಡುತ್ತಿಲ್ಲ, ಗ್ರಾಮ ಪಂಚಾಯ್ತಿ ಸದಸ್ಯನಂತೆ ಜನರ ಮಧ್ಯೆ ನಿಂತು ಕೆಲಸ ಮಾಡುತ್ತಿದ್ದಾರೆ” ಎಂದರು.

ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಬಳಕೆ ಕಡ್ಡಾಯದ ಬಗ್ಗೆ ಕೇಳಿದಾಗ, “ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯ ಮಾಡಲು ನೀಡಿದ್ದ ಕಾಲಮಿತಿ ಮುಕ್ತಾಯವಾಗಿದೆ. ಕನ್ನಡ ಪರ ಚಳುವಳಿಗಾರರು ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಸರ್ಕಾರ ಕನ್ನಡ ಬಳಕೆ ಕಡ್ಡಾಯ ಮಾಡಲು ಬದ್ಧವಾಗಿದೆ” ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News