ಬರದ ಬಗ್ಗೆ ಮಾತಾಡುವ ಬಿಜೆಪಿಯವರು ಕೇಂದ್ರದಿಂದ ಪರಿಹಾರ ತರಲಿ, ನರೇಗಾ ಯೋಜನೆಯಡಿ ಮಾನವ ದಿನಗಳನ್ನು ಹೆಚ್ಚಿಸಲಿ: ಡಿಸಿಎಂ ಡಿಕೆಶಿ

Update: 2023-12-08 09:49 GMT

ಬೆಳಗಾವಿ: "ಬಿಜೆಪಿ ನಾಯಕರು ಬರಗಾಲದ ಬಗ್ಗೆ ಸುಮ್ಮನೆ ಮಾತನಾಡುವ ಬದಲು ಕೇಂದ್ರ ಸರ್ಕಾರದಿಂದ ಪರಿಹಾರ ತರಲಿ ಹಾಗೂ ನರೇಗಾ ಯೋಜನೆಯಡಿ ಮಾನವ ದಿನಗಳನ್ನು 150ಕ್ಕೆ ಹೆಚ್ಚಳ ಮಾಡಿಸಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್  ಹೇಳಿದರು.

ಬೆಳಗಾವಿ ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ  ಉತ್ತರಿಸಿದ ಅವರು, “ಬರಗಾಲ ಬಂದಿದೆ. ವಿರೋಧ ಪಕ್ಷದ ನಾಯಕರು ಕೂಡ ಬರ ಅಧ್ಯಯನಕ್ಕಾಗಿ ಓಡಾಡಿದ್ದಾರೆ. ಅವರು ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಕೊಡಿಸಲಿ. ಬರಗಾಲ ಹಿನ್ನೆಲೆಯಲ್ಲಿ ನರೇಗಾ ಯೋಜನೆಯಲ್ಲಿ ಕಾನೂನಿನ ಪ್ರಕಾರ ಪ್ರತಿ ವ್ಯಕ್ತಿಗೆ ಇರುವ 100 ಕೆಲಸದ ದಿನಗಳನ್ನು 150 ದಿನಗಳಿಗೆ ವಿಸ್ತರಣೆ ಮಾಡಬಹುದು. ಇದನ್ನು ಕೇಂದ್ರ ಸರ್ಕಾರದಿಂದ ಘೋಷಣೆ ಮಾಡಿಸುತ್ತಿಲ್ಲ ಯಾಕೆ? ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಕೊಡಿಸುತ್ತಿಲ್ಲ ಯಾಕೆ?" ಎಂದು ಪ್ರಶ್ನಿಸಿದರು.

"ನಮ್ಮ ಸರ್ಕಾರದಲ್ಲಿ ಕಂದಾಯ ಹಾಗೂ ಕೃಷಿ ಸಚಿವರುಗಳು ಎಲ್ಲರಿಗಿಂತ ಮುಂಚಿತವಾಗಿ ರಾಜ್ಯದ ಬರ ಪರಿಸ್ಥಿತಿ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳು ಬರಕ್ಕೆ ತುತ್ತಾಗಿದ್ದು, ಪರಿಹಾರ ಬೇಕು ಎಂದು ಕೇಳಿದ್ದಾರೆ. ಈವರೆಗೂ ಕೇಂದ್ರ ಸರ್ಕಾರ ಬಿಡಿಗಾಸು ಪರಿಹಾರ ನೀಡಿಲ್ಲ. ಈಗ ಅವರು ಬಿಜೆಪಿ ನಾಯಕರು ತಮ್ಮ ವರದಿ ಕೊಟ್ಟು ಪರಿಹಾರ ಕೊಡಿಸಲಿ. ಬರಗಾಲ ಎಂದು ಕೇವಲ ಮಾತನಾಡುವುದಲ್ಲ. ಬರೀ ಆರೋಪ ಮಾಡುವುದಕ್ಕಿಂತ ತಾನು ಏನು ಮಾಡಿದ್ದೇವೆ ಎಂದು ಹೇಳಬೇಕು” ಎಂದು ತಿಳಿಸಿದರು.

ರಾಜ್ಯ ಸರಕಾರದ ವತಿಯಿಂದ ಯಾವ ಪ್ಯಾಕೇಜ್ ಘೋಷಣೆ ಮಾಡುತ್ತೀರಾ ಎಂದು ಕೇಳಿದಾಗ, “ಈ ವಿಚಾರವಾಗಿ ಮುಖ್ಯಮಂತ್ರಿಗಳು ಯಾರಿಗೆ ಯಾವ ರೀತಿ ಪರಿಹಾರ ನೀಡಬೇಕು ಎಂದು ಮಾತನಾಡಿದ್ದಾರೆ. ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು, ಗೋಶಾಲೆಗಳಿಗೆ ಮೇವು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ” ಎಂದು ತಿಳಿಸಿದರು.

ಇನ್ನು ತೆಲಂಗಾಣ ಸರಕಾರ ರಚನೆ ಬಗ್ಗೆ ಮಾತನಾಡಿ, “ಸೋನಿಯಾ ಗಾಂಧಿ ಅವರು ತೆಲಂಗಾಣ ರಾಜ್ಯ ರಚನೆಗೆ ನೆರವಾಗಿದ್ದರು. ಕೆಸಿಆರ್ ಅವರು ಪಕ್ಷವನ್ನು ವಿಲೀನ ಮಾಡಿ ನಮ್ಮ ಜೊತೆ ಇರುವುದಾಗಿ ಹೇಳಿದ್ದರು. ಆದರೆ ಅವರು ಪ್ರತ್ಯೇಕವಾಗಿ 10 ವರ್ಷಗಳ ಕಾಲ ಸರಕಾರ ನಡೆಸಿದರು. ಈ ವಿಚಾರವಾಗಿ ನಾವು ಜನರಿಗೆ ಮನದಟ್ಟು ಮಾಡಿಕೊಟ್ಟು ನಿಮ್ಮಲ್ಲಿ ಬದಲಾವಣೆ ತರುತ್ತೇವೆ ಎಂದು ಭರವಸೆ ನೀಡಿದೆವು. ಹೀಗಾಗಿ ತೆಲಂಗಾಣ ರಾಜ್ಯದ ಜನ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟಿದ್ದಾರೆ. ಇಂದು ತೆಲಂಗಾಣದಲ್ಲಿ ಸರಕಾರ ರಚನೆಯಾಗಿದೆ. ನಾನು, ಮುಖ್ಯಮಂತ್ರಿಗಳು ಸೇರಿದಂತೆ ಕೆಲವು ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವೆ” ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News