ಸರಕಾರಿ ಸಂಸ್ಥೆಗಳಲ್ಲಿ ಭ್ರಷ್ಟಾಚಾರದ ಮೂಲಕ ಕುಟುಂಬದ ಆಸ್ತಿಗಳಿಸುವುದೇ ಬಿಜೆಪಿ ಉದ್ದೇಶ: ಸಿಎಂ ಸಿದ್ದರಾಮಯ್ಯ

Update: 2024-01-02 14:28 GMT

ಬೆಂಗಳೂರು: ‘ಬಿಜೆಪಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಪುತ್ರ ಪ್ರಶಾಂತ್ ಮಾಡಾಳ್‍ರಂತಹ ಭ್ರಷ್ಟರ ಕೈಗೆ ಸಿಕ್ಕಿ ನಲುಗಿ ಹೋಗಿದ್ದ ರಾಜ್ಯ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ ನಮ್ಮ ಸರಕಾರದ ಪ್ರಾಮಾಣಿಕ ಕಾಳಜಿಯಿಂದಾಗಿ ನಲವತ್ತು ವರ್ಷಗಳಲ್ಲೇ ಹೊಸ ದಾಖಲೆ ಬರೆದಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಗಳವಾರ ʼಎಕ್ಸ್‌ʼ ಲ್ಲಿ ಪೋಸ್ಟ್ ಹಾಕಿರುವ ಅವರು, ‘ಕಾರ್ಮಿಕರ ಶ್ರಮದಲ್ಲಿ ಸಂಸ್ಥೆ ಬೆಳೆಸಬೇಕಿದ್ದವರು ಕುಟುಂಬದ ಆಸ್ತಿ ಸಂಪಾದನೆಗೆ ಇಳಿದರೆ ಲಾಭದಲ್ಲಿದ್ದ ಸಂಸ್ಥೆ ಹೇಗೆ ಅವಸಾನದತ್ತ ಸರಿಯುತ್ತದೆಂಬುದಕ್ಕೆ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಕೆಎಸ್‍ಡಿಎಲ್ ಸಾಗಿದ ಹಾದಿ ಉದಾಹರಣೆ. ಅದೇ ಕೆಎಸ್‍ಡಿಎಲ್ ಇಂದು ಹೊಸ ರೂಪದೊಂದಿಗೆ ಖಾಸಗಿ ಕಂಪೆನಿಗಳಿಗೆ ಸೆಡ್ಡು ಹೊಡೆಯುವಷ್ಟು ಬಲಶಾಲಿಯಾಗಿ ನಿಂತಿರುವುದು ನಮ್ಮ ಸರಕಾರದ ಆಡಳಿತ ವೈಖರಿಗೆ ಸಾಕ್ಷಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಸ್ವತಂತ್ರ ಭಾರತದಲ್ಲಿ ಸರಕಾರಿ ಸಂಸ್ಥೆಗಳನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷ, ಅವುಗಳ ಉಳಿವಿಗಾಗಿ ಹೋರಾಡುತ್ತಿರುವುದು ಕಾಂಗ್ರೆಸ್ ಪಕ್ಷವೇ. ನಾವು ಕಟ್ಟಿದ ಸಂಸ್ಥೆಯನ್ನು ಮಾರಲು ಅಥವಾ ಭ್ರಷ್ಟಾಚಾರದ ಮೂಲಕ ಕುಟುಂಬದ ಆಸ್ತಿಗಳಿಸುವುದೇ ಬಿಜೆಪಿಯವರ ಏಕೈಕ ಉದ್ದೇಶ. ಇದನ್ನು ನಾಡಿನ ಜನತೆ ಅರ್ಥಮಾಡಿಕೊಳ್ಳಬೇಕು’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News