ಬ್ರ್ಯಾಂಡ್ ಬೆಂಗಳೂರು: ಕೆನಡಾ ಮೂಲದ ಸಂಸ್ಥೆಯೊಂದಿಗೆ ಒಪ್ಪಂದ

Update: 2023-07-24 18:02 GMT

ಬೆಂಗಳೂರು, ಜು.24: ರಾಜಧಾನಿ ಬೆಂಗಳೂರಿಗೆ ಹೊಸ ರೂಪ ನೀಡಿ ಈ ನಗರವನ್ನು ಜಾಗತಿಕ ನಗರವಾಗಿ ರೂಪಿಸುವ ಉದ್ದೇಶದಿಂದ ರಾಜ್ಯ ಸರಕಾರ ಹಾಗೂ ಬೆಂಗಳೂರು ಮಹಾನಗರ ಪಾಲಿಕೆಯು ಕೆನಡಾ ಮೂಲದ ವರ್ಡ್ ಡಿಸೈನ್ ಆರ್ಗನೈಸೇಷನ್(ಡಬ್ಲ್ಯುಡಿಒ) ಜತೆ ಒಪ್ಪಂದ ಮಾಡಿಕೊಂಡಿದೆ.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಈ ಸಂಬಂಧ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಬ್ರ್ಯಾಂಡ್ ಬೆಂಗಳೂರು ಹಾಗೂ ಕರ್ನಾಟಕದ ಪಾಲಿಗೆ ಇಂದು ಹೊಸ ಅಧ್ಯಾಯ ಆರಂಭವಾಗುತ್ತಿದೆ. ಕರ್ನಾಟಕದ ಭವಿಷ್ಯದ ಅಭಿವೃದ್ಧಿಗೆ ಇದು ಹೆಜ್ಜೆಗುರುತಾಗಲಿದೆ. ಕೆಲ ವರ್ಷಗಳ ಹಿಂದೆ ವಿಶ್ವ ವಿನ್ಯಾಸ ರಾಜಧಾನಿ ಯಾವುದು ಎಂಬ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಇದರಲ್ಲಿ ಬೆಂಗಳೂರು ಯಶ ಕಾಣಲಿಲ್ಲ. ಬೆಂಗಳೂರು ವಾಸಯೋಗ್ಯ ನಗರವಾಗಿ ನಿರ್ಮಾಣ ಮಾಡಬೇಕಿದೆ. ಇದಕ್ಕಾಗಿ ಈ ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದರು.

ಬೆಂಗಳೂರು ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಈ ನಗರವನ್ನು ಜಾಗತಿಕ ನಗರವಾಗಿ ಮಾಡಲು ಸರಕಾರ ಬದ್ಧವಾಗಿದೆ. ಯಾವುದೇ ಯೋಜನೆಯಾದರೂ ಅದರ ವಿನ್ಯಾಸ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹೀಗಾಗಿ ನಾವು ಇಂದು ಈ ಸಂಸ್ಥೆ ಜೊತೆ ಕೈಜೋಡಿಸುತ್ತಿದ್ದೇವೆ. ಈ ಸಂಸ್ಥೆ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳ ವಿಚಾರದಲ್ಲಿ ಸಲಹೆ, ಮಾರ್ಗದರ್ಶನ ನೀಡಲಿದೆ ಎಂದು ಅವರು ತಿಳಿಸಿದರು.

ಆರಂಭದಲ್ಲಿ ಈ ಒಪ್ಪಂದ ಕೇವಲ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಇದನ್ನು ಬಿಎಂಆರ್‍ಡಿಎ ವ್ಯಾಪ್ತಿಯ ಪ್ರದೇಶಗಳನ್ನು ಒಳಗೊಳ್ಳಲಾಗಿದೆ. ಬೆಂಗಳೂರು ತನ್ನದೇ ಆದ ಇತಿಹಾಸ, ಪರಂಪರೆ, ಸಂಸ್ಕøತಿ ಹೊಂದಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಇಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದದಿಂದ ನಮಗೆ ಶಕ್ತಿ ಹೆಚ್ಚಲಿದೆ. ಸರಕಾರ ಹಾಗೂ ಬಿಬಿಎಂಪಿ ಪರವಾಗಿ ಆಯುಕ್ತರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಅವರು ಹೇಳಿದರು.

ನಮ್ಮ ಹಿರಿಯರು ತಮ್ಮದೇ ಆದ ರೀತಿಯಲ್ಲಿ ಬೆಂಗಳೂರನ್ನು ಕಟ್ಟಿದ್ದಾರೆ. ಬೆಂಗಳೂರನ್ನು ಅಂತರ್‍ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ನಾವು ಅದಕ್ಕೆ ಹೊಸ ರೂಪ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಈಗಿರುವ ಬೆಂಗಳೂರಿನಲ್ಲಿ ಯಾವ ರೀತಿಯ ಬದಲಾವಣೆ ಮಾಡಬಹುದು, ಮುಂದೆ ಬೆಳೆಯಲಿರುವ ಬೆಂಗಳೂರನ್ನು ಹೇಗೆ ರೂಪಿಸಬೇಕು, ಹೊಸ ಸ್ಯಾಟಲೈಟ್ ಟೌನ್ ಹೇಗೆ ರೂಪಿಸಬೇಕು ಎಂಬುದರ ಬಗ್ಗೆ ಸಲಹೆ ನೀಡಲು ಈ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ಶಿವಕುಮಾರ್ ಮಾಹಿತಿ ನೀಡಿದರು.

ಈ ಸಂಸ್ಥೆ ಕೇಂದ್ರ ಕಚೇರಿ ಕೆನಡಾದಲ್ಲಿದ್ದು, ವಿಶ್ವದ ಅತ್ಯುತ್ತಮ ಆರ್ಕಿಟೆಕ್ಚರ್ ಗಳನ್ನು ಹೊಂದಿದೆ. ಈ ಸಂಸ್ಥೆ ಅನೇಕ ದೇಶಗಳ ಜತೆ ಕೆಲಸ ಮಾಡಿದೆ. ಮುಂದಿನ ದಿನಗಳಲ್ಲಿ ಸುಮಾರು 200-300 ಇಂಜಿನಿಯರ್ ಗಳು ಕೆಲಸ ಮಾಡಲಿದ್ದಾರೆ. ಇಲ್ಲಿ ಅವರು ಯಾವುದೇ ಕಟ್ಟಣ ನಿರ್ಮಾಣ ಮಾಡುವುದಿಲ್ಲ. ಇವರು ಬೆಂಗಳೂರಿಗೆ ಹೊಸ ರೂಪ ನೀಡಲು ಸಲಹೆ ನೀಡುತ್ತಾರೆ. ಇವರು ಈಗ ಯಾವ ರೀತಿ ಸಲಹೆ ನೀಡುತ್ತಾರೆ ಎಂಬುದನ್ನು ನೋಡಿಕೊಂಡು ನಂತರದ ದಿನಗಳಲ್ಲಿ ಜಿಲ್ಲಾ ಕೇಂದ್ರಗಳು ಹಾಗೂ ತಾಲೂಕು ಕೇಂದ್ರಗಳಿಗೆ ರೂಪ ನೀಡುವ ಬಗ್ಗೆ ಆಲೋಚಿಸುತ್ತೇವೆ ಎಂದು ಅವರು ತಿಳಿಸಿದರು.

ಈ ಹಿಂದೆ ಈ ಸಂಸ್ಥೆ ಜೊತೆ 200 ಕೋಟಿ ರೂ.ಗೆ ಒಪ್ಪಂದ ಆಗಿದ್ದು ಈಗ ಇದನ್ನು ಹೆಚ್ಚಿಸಲಾಗಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಒಪ್ಪಂದದ ಮೊತ್ತವನ್ನು ಕಡಿಮೆ ಮಾಡಿದ್ದೇವೆ. ಮೊದಲ ವರ್ಷ ನೀಡಬೇಕಾದ ಮೊತ್ತದಲ್ಲಿ ಕೇವಲ ಅರ್ಧದಷ್ಟು ಮಾತ್ರ ನೀಡುತ್ತೇವೆ. ಅವರ ಕೆಲಸ ಹೇಗಿರುತ್ತದೆ ಎಂದು ನೋಡಿ ನಂತರ ಮುಂದುವರಿಯುವುದಾಗಿ ಹೇಳಿದ್ದೇವೆ ಎಂದರು.

ಅವರು ನೀಡುವ ಸಲಹೆಗಳು ನಾವು ಜಾರಿ ಮಾಡುವಂತಿರಬೇಕು. ಹೀಗಾಗಿ ಈ ಒಪ್ಪಂದವನ್ನು ಷರತ್ತುಗಳ ಆಧಾರದ ಮೇಲೆ ಐದು ವರ್ಷಕ್ಕೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ಕೂಡ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಈಗ ಅದರ ವ್ಯಾಪ್ತಿ ಹೆಚ್ಚಿಸಲಾಗಿದೆ. ಈಗ ಬೆಳೆದಿರುವ ಬೆಂಗಳೂರು ಯೋಜಿತವಾಗಿ ಬೆಳೆದಿಲ್ಲ. ಹೀಗಾಗಿ ಬೆಂಗಳೂರು ನಗರದಲ್ಲಿ ಎಷ್ಟು ಬದಲಾವಣೆ ತರಲು ಸಾಧ್ಯ? ಮುಂದೆ ಬೆಂಗಳೂರು ಬೆಳೆಯುವ ಪ್ರದೇಶಗಳಲ್ಲಿ ಸರಿಯಾದ ರೀತಿಯಲ್ಲಿ ಯೋಜನೆ ರೂಪಿಸಲು ಈ ತೀರ್ಮಾನ ಮಾಡಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.

ಒಪ್ಪಂದಕ್ಕೆ ಸಹಿ: ಬ್ಯಾಂಡ್ ಬೆಂಗಳೂರು ಅಭಿವೃದ್ಧಿ ಸಂಬಂಧದ ಒಪ್ಪಂದಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಕೆನಡಾ ಮೂಲದ ವರ್ಡ್ ಡಿಸೈನ್ ಸಂಸ್ಥೆಯ ಅಧ್ಯಕ್ಷ ಡೇವಿಡ್ ಕುಸುಮ ಸಹಿ ಹಾಕಿದರು. ಈ ಸಂದರ್ಭದಲ್ಲಿ ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News