ಸೆನ್ಸಾರ್ ಸರ್ಟಿಫಿಕೇಟ್ ನೀಡಲು ಲಂಚ; ಅಧಿಕಾರಿ ಸಿಬಿಐ ವಶಕ್ಕೆ

Update: 2023-11-29 17:13 GMT

ಬೆಂಗಳೂರು: ಸೆನ್ಸಾರ್ ಸರ್ಟಿಫಿಕೇಟ್ ನೀಡಲು ಸಿನಿಮಾ ತಂಡದಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಸೆನ್ಸಾರ್ ಮಂಡಳಿಯ ಪ್ರಾದೇಶಿಕ ಅಧಿಕಾರಿಯನ್ನು ಸಿಬಿಐ ಅಧಿಕಾರಿಗಳ ತಂಡ ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.

ಪ್ರಶಾಂತ್ ಕುಮಾರ್ ಎಂಬುವರೇ ಸಿಬಿಐ ವಶಪಡಿಸಿಕೊಂಡ ಆರೋಪಿ. ‘ಅಡವಿ’ ಹೆಸರಿನ ಕನ್ನಡ ಸಿನಿಮಾಗೆ ಸೆನ್ಸಾರ್ ಸರ್ಟಿಫಿಕೇಟ್ ಕೊಡಲು 15ಸಾವಿರ ರೂ.ಲಂಚಕ್ಕೆ ಬೇಡಿಕೆಯಿಟ್ಟಿದ್ದರು. 12 ಸಾವಿರ ರೂ.ಹಣ ಪಡೆಯುವಾಗ ಸಿಬಿಐ ಅಧಿಕಾರಿಗಳು ಪ್ರಶಾಂತ್ ಕುಮಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಅಡವಿ ಹೆಸರಿನ ಚಿತ್ರತಂಡ ಸೆನ್ಸಾರ್ ಸರ್ಟಿಫಿಕೇಟ್ ಪಡೆಯಲು ನ.21ರಂದು ಮಲ್ಲೇಶ್ವರಂನ ಎಸ್‍ಆರ್ ವಿ ಸ್ಟುಡಿಯೋದಲ್ಲಿ ಚಿತ್ರದ ಪ್ರದರ್ಶನ ಆಯೋಜಿಸಿತ್ತು. ಚಿತ್ರ ವೀಕ್ಷಿಸಿದ್ದ ಸೆನ್ಸಾರ್ ಮಂಡಳಿಯ ಪ್ರಾದೇಶಿಕ ಅಧಿಕಾರಿ ಪ್ರಶಾಂತ್ ಕುಮಾರ್, ಕ್ಷುಲ್ಲಕ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ನೀಡಲು 15 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಒಂದು ವಾರದಿಂದ ಸೆನ್ಸಾರ್ ಸರ್ಟಿಫಿಕೇಟ್ ನೀಡದೆ ಸತಾಯಿಸುತ್ತಿದ್ದುದರಿಂದ ಬೇಸತ್ತ ಚಿತ್ರ ನಿರ್ಮಾಪಕ ಎ.ವಿ.ನಾಗರಾಜ್ ಸಿಬಿಐ ಅಧಿಕಾರಿಗಳಿಗೆ ದೂರು ನೀಡಿದ್ದರು.

ದೂರಿನನ್ವಯ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡ ಸಿಬಿಐ ಅಧಿಕಾರಿಗಳು, 12 ಸಾವಿರ ರೂ. ಸ್ವೀಕರಿಸುತ್ತಿದ್ದ ಪ್ರಶಾಂತ್ ಕುಮಾರ್ ರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ ಎಂದು ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News