ಚುನಾವಣೆಯಲ್ಲಿ ಕುಟುಂಬಸ್ಥರು ಸ್ಪರ್ಧಿಸಬಾರದೆಂದು ಮಸೂದೆ ತನ್ನಿ: ಎಚ್.ಡಿ.ರೇವಣ್ಣ

Update: 2023-08-08 14:22 GMT

ಬೆಂಗಳೂರು, ಆ.8:ಚುನಾವಣೆಯಲ್ಲಿ ಕುಟುಂಬದವರ ಸ್ಪರ್ಧೆ ಬೇಡವೆಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಸೂದೆ ತರಲಿ. ಆದರೆ, ಅದನ್ನು ಬಿಟ್ಟು ಬೆಳಗ್ಗೆ ಎದ್ದರೆ ದೇವೇಗೌಡರ ಕುಟುಂಬದ ಹೆಸರೇ ಬರುತ್ತದೆ. ಬೇರೆ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಇಲ್ಲವೇ ಎಂದು ಮಾಜಿ ಸಚಿವ ಎಚ್.ಡಿ.ರೇವಣಪ್ಪ ಪ್ರಶ್ನಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಸಂಬಂಧ ಎಚ್.ಡಿ.ದೇವೇಗೌಡರು ತೆಗೆದುಕೊಂಡ ತೀರ್ಮಾನವೇ ಅಂತಿಮವಾಗಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ನಮ್ಮ ಮೇಲೆ ಕುಟುಂಬ ರಾಜಕಾರಣದ ಟೀಕೆಗಳನ್ನು ನಿಲ್ಲಿಸಲಿ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ತಿಂಗಳಾಗಿದ್ದು, ರೈತರನ್ನು ನಿರ್ಲಕ್ಷ್ಯ ಮಾಡಿದೆ. ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಭರವಸೆಗಳ ಅನುಷ್ಠಾನದಲ್ಲಿ ನಿರತವಾಗಿದೆ. ಗ್ಯಾರಂಟಿ ಅನುಷ್ಠಾನಗೊಳಿಸಲು ನಮ್ಮ ಅಭ್ಯಂತರವಿಲ್ಲ. ಆದರೆ, ಅನ್ನದಾತರನ್ನು ನಿರ್ಲಕ್ಷಿಸಬಾರದು ಎಂದು ಹೇಳಿದರು.

ಲಭ್ಯವಿರುವ ನೀರಿನ ಪ್ರಮಾಣ, ನೀರಾವರಿಗೆ, ಕುಡಿಯುವ ನೀರಿಗೆ ಎಷ್ಟು ನೀರು ಬಳಸಬಹುದು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಬೇಕು. ಇನ್ನೂ, ಜುಲೈ ಅಥವಾ ಆಗಸ್ಟ್ ಮೊದಲ ವಾರದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ, ಈ ವರ್ಷ ಇನ್ನೂ ನಾಲೆಗಳಿಗೆ ನೀರು ಹರಿಸದಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು.

ಪ್ರಸ್ತುತ ಲೋಕೋಪಯೋಗಿ ಇಲಾಖೆಯಲ್ಲಿ 165 ಸಹಾಯಕ ಕಾರ್ಯಪಾಲಕ ಇಂಜಿನಿಯರ್‍ಗಳ ಹುದ್ದೆ ಖಾಲಿ ಇದ್ದು, ಸಾಮಾನ್ಯ ವರ್ಗದ 170 ಸಹಾಯಕ ಇಂಜಿನಿಯರ್ ಗಳಿಗೆ ಮುಂಭಡ್ತಿ ನೀಡಲು ಬಾಕಿ ಇದೆ. ಯಾವ ಉದ್ದೇಶದಿಂದ ಮುಂಭಡ್ತಿ ವಿಳಂಬವಾಗುತ್ತಿದೆ. ಕಾಲಮಿತಿಯಲ್ಲಿ ಮುಂಭಡ್ತಿ ನೀಡಬೇಕು ಎಂದು ರೇವಣ್ಣ ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News