ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ದೂರು ನೀಡಿದ ಸಿ.ಟಿ.ರವಿ
ಬೆಂಗಳೂರು: ಬೆಳಗಾವಿಯ ಅಧಿವೇಶನದ ಕಲಾಪದಲ್ಲಿ ಡಿ.19ರಂದು ಇಡೀ ರಾತ್ರಿ ಪೊಲೀಸರು ಅಮಾನವೀಯವಾಗಿ ವರ್ತನೆ ಮಾಡಿದ್ದು, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ತು ಸದಸ್ಯ ಸಿ.ಟಿ. ರವಿ ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.
ಸೋಮವಾರ ನಗರದಲ್ಲಿ ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯರನ್ನು ಒಳಗೊಂಡ ಸಿ.ಟಿ. ರವಿ ನೇತೃತ್ವದ ನಿಯೋಗವು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‍ರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದು, ಬೆಳಗಾವಿ ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್, ಎಸ್‍ಪಿ ಗುಳೇದ್ ಮತ್ತು ಇತರೆ ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ತಮಗೆ ಪ್ರಾಣಾಪಾಯ ಇದ್ದು, ಸೂಕ್ತ ಭದ್ರತೆ ಕೊಡಬೇಕು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ಪೊಲೀಸರು ಸುಪಾರಿ ಕಿಲ್ಲರ್ ರೀತಿ ವರ್ತಿಸಿದ್ದಾರೆ. ನಿಗೂಢ ಸ್ಥಳಗಳಿಗೆ ಕರೆದೊಯ್ದು ಫೇಕ್ ಎನ್‍ಕೌಂಟರ್ ಮಾಡಲು ಸಂಚು ರೂಪಿಸಿದ್ದರು. ಪೊಲೀಸರು ಸುವರ್ಣಸೌಧದೊಳಗೆ ಪ್ರವೇಶ ಮಾಡಿ ಬಂಧಿಸಿದ್ದು ಅಕ್ರಮವಾಗಿದ್ದು, ನನ್ನ ಹಕ್ಕು ಚ್ಯುತಿ ಆಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಕೊಲೆ ಮಾಡಿವುದಾಗಿ ಧಮ್ಕಿ ಹಾಕಿದ್ದಾರೆ. ಸದನದ ವ್ಯಾಪ್ತಿಯಲ್ಲಿ ನಡೆದ ಘಟನೆ ಬಗ್ಗೆ ತನಿಖೆ ನಡೆಸುವ ಅಧಿಕಾರ ಸಿಐಡಿಗಿಲ್ಲ. ಘಟನೆ ನಡೆದ ಸ್ಥಳ ಸಿಐಡಿ ವ್ಯಾಪ್ತಿಗೂ ಬರುವುದಿಲ್ಲ. ನನ್ನ ಬಂಧನ ಅಕ್ರಮ ಹಾಗೂ ಕಾನೂನು ವಿರೋಧಿ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನನ್ನನ್ನು ಕಬ್ಬಿನ ಗದ್ದೆ, ಕ್ರಷರ್‌ಗೆ ಕರೆದುಕೊಂಡು ಹೋಗಿ ಎನ್‍ಕೌಂಟರ್ ಮಾಡಲು ಯತ್ನಿಸಿದ್ದರು. ಒಂದೋ ಹತ್ಯೆ ಮಾಡಬೇಕು, ಇಲ್ಲವೇ ಆತ್ಮಹತ್ಯೆಗೆ ಶರಣಾಗಬೇಕು ಎನ್ನುವಂತಹ ಕಾಟ ಕೊಟ್ಟಿದ್ದಾರೆ ಎಂದು ಸಿ.ಟಿ. ರವಿ ಆರೋಪಿಸಿದ್ದಾರೆ.