ಪೂಂಛ್‌ನಲ್ಲಿ ಕಂದಕಕ್ಕೆ ಉರುಳಿದ್ದ ಸೇನಾ ವಾಹನ : ಗಾಯಗೊಂಡಿದ್ದ ಕೊಡಗಿನ ಯೋಧ ಮೃತ್ಯು
ಮಡಿಕೇರಿ : ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಡಿ.24ರ ಸಂಜೆ ಸೇನಾ ವಾಹನ ಪ್ರಪಾತಕ್ಕೆ ಉರುಳಿದ್ದ ದುರಂತದಲ್ಲಿ ಕೊಡಗಿನ ಯೋಧ ದಿವಿನ್(28) ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು(ರವಿವಾರ) ಅವರು ಮೃತಪಟ್ಟಿದ್ದಾರೆ.
ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರದ ನಿವಾಸಿ ದಿವಂಗತ ಪ್ರಕಾಶ್-ಜಯ ದಂಪತಿ ಪುತ್ರ ದಿವಿನ್ ಮೃತ ಯೋಧ. ಚಿಂತಾಜನಕ ಸ್ಥಿತಿಯಲ್ಲಿದ್ದ ದಿವಿನ್ ಅವರನ್ನು ಶ್ರೀನಗರ ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ದಿವಿನ್ ತಾಯಿ ಜಯ ಅವರು ಗುರುವಾರ ಸಂಜೆ ಶ್ರೀನಗರಕ್ಕೆ ತೆರಳಿದ್ದರು. ದಿವಿನ್ ತನ್ನ ತಾಯಿಗೆ ಏಕೈಕ ಆಸರೆಯಾಗಿದ್ದು, 10 ವರ್ಷದ ಹಿಂದೆ ಸೇನೆಗೆ ಸೇರಿದ್ದರು. ಇತ್ತೀಚೆಗೆ ನಿಶ್ಚಿತಾರ್ಥ ಕೂಡ ನೆರವೇರಿದ್ದು, 2025ರ ಫೆಬ್ರವರಿಯಲ್ಲಿ ವಿವಾಹ ನಿಶ್ಚಿಯವಾಗಿತ್ತು. ಆಮಂತ್ರಣ ಪತ್ರವೂ ಮುದ್ರಣಗೊಂಡಿದೆ.
ಆಲೂರು ಸಿದ್ದಾಪುರ ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು, ಸೋಮವಾರ ಅಥವಾ ಮಂಗಳವಾರ ಪಾರ್ಥೀವ ಶರೀರ ಕೊಡಗಿಗೆ ಬರುವ ಸಾಧ್ಯತೆಗಳಿದೆ. ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ದಿವಿನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.