ದಲಿತ ಎನ್ನುವ ಶಬ್ದ ಸರಿಯಾದುದಲ್ಲ: ಬಿ.ಟಿ. ಲಲಿತಾ ನಾಯಕ್
ಬೆಂಗಳೂರು: ‘ದಲಿತ’ ಎಂಬ ಪದಕ್ಕೆ ಕೆಟ್ಟ ಅರ್ಥವಿದೆ. ‘ದಲಿತ’ ಎಂದರೆ ತಂದೆ ಇಲ್ಲದೇ ಹುಟ್ಟಿರುವ ಮಕ್ಕಳು. ಆದ್ದರಿಂದ ದಲಿತ ಎನ್ನುವ ಪದ ಬಳಸುವುದು ಸರಿಯಾದುದಲ್ಲ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಹೇಳಿದ್ದಾರೆ.
ಬುಧವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಕರ್ನಾಟಕ ಅಹಿಂದ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕ್ಷೌರಿಕರಿಗೆ ಕ್ಷೌರ ಮಾಡುವುದರಿಂದ, ಕುಂಬಾರರಿಗೆ ಮಡಿಕೆ ಮಾಡುವರಿಂದ ಆ ಹೆಸರು ಬಂದಿದೆ. ಹಾಗೆಯೆ ಪ್ರತಿಯೊಂದು ಜಾತಿ ವರ್ಗಗಳೆಲ್ಲವೂ ಅವರವರ ಜಾತಿಯ ಕಸುಬುನಲ್ಲಿ ಹುಟ್ಟಿಕೊಂಡಿದೆ. ಆದರೆ ದಲಿತ ಎನ್ನುವ ಪದ ಕುಲದ ಕಸುಬು ಆಗಿಲ್ಲ ಎಂದರು.
ದಲಿತ, ದಲಿತರ ಕೇರಿ, ದಲಿತರ ಓಣಿ, ದಲಿತ ಮಂತ್ರಿ ಈ ರೀತಿಯ ಹೆಸರುಗಳಲ್ಲಿ ಅವರನ್ನು ಕರೆಯುವುದು ಹೀನಾಯವಾಗಿದೆ. ಆದ್ದರಿಂದ ದಲಿತ ಜನಾಂಗಕ್ಕೆ ಒಳ್ಳೆಯ ಆತ್ಮ ವಿಶ್ವಾಸ ಇರುವ ರೀತಿಯಲ್ಲಿ, ತೇಜೋವದೆ ಆಗಲಾರದ ರೀತಿಯಲ್ಲಿ ಹೆಸರುಗಳು ಇರಬೇಕಾಗುತ್ತದೆ. ದೇವರ ಹೆಸರಿನಲ್ಲಿ ನಡೆಯುವ ಮೌಢ್ಯವನ್ನು ಎಲ್ಲಿಯವರೆಗೆ ಅರ್ಥ ಮಾಡಿಕೊಳ್ಳುವುದಿಲ್ಲವೋ, ಅಲ್ಲಿಯವರೆಗೂ ದಲಿತರಾಗಿಯೇ ಉಳಿಯಬೇಕಾಗುತ್ತದೆ ಎಂದು ಲಲಿತಾ ನಾಯಕ್ ಎಚ್ಚರಿಕೆ ನೀಡಿದರು.
ಯುವಜನಾಂಗ, ವಿದ್ಯಾವಂತರು ಅಸ್ಪøಶ್ಯತೆಯಿಂದ ಹೊರ ಬರುವ ಕೆಲಸ ಮಾಡಬೇಕೆ ಹೊರತು, ಮತ್ತೆ ಅದರೊಳಗೆ ಹೋಗಿ ಸೇರಿಕೊಳ್ಳುವ ರೀತಿಯಲ್ಲಿ ದೇವಸ್ಥಾನಗಳನ್ನು ಕಟ್ಟಿಸುವುದು, ಪೂಜೆ ಮಾಡಬೇಕು ಎಂದು ಬಯಸುವಂತದ್ದು ಮಾಡಬಾರದು. ಅವರು ಏನು ಹೇಳ್ತಾರೋ ಅದೆಲ್ಲವನ್ನೂ ಬ್ರಾಹ್ಮಣೀಕರಣ ಮಾಡಿಕೊಂಡು ತಮ್ಮ ತನವನ್ನು ಮರೆಯುವಂತದ್ದು ಸರಿಯಲ್ಲ. ಬ್ರಾಹ್ಮಣ್ಯ ಹೇಳುವ ಬಹುತೇಕ ಎಲ್ಲವೂ ಮಾನವ, ಪರಿಸರ ವಿರೋಧಿಯಾಗಿರುತ್ತದೆ. ಅದನ್ನು ಒಪ್ಪಿಕೊಂಡು ತಮ್ಮ ಜನಕ್ಕೆ ಮೋಸ ಮಾಡುವ ರೀತಿಯಲ್ಲಿ ಇರಬಾರದು. ಸುಮುದಾಯ ಒಗ್ಗಟ್ಟಿನಂದ ಕೂಡಿರುಬೇಕು ಎಂದು ಅವರು ಹೇಳಿದರು.
ಡಾ.ಅಂಬೇಡ್ಕರ್ ರನ್ನು ಸುಮ್ಮನೆ ಹೊಗಳಿದ ಮಾತ್ರಕ್ಕೆ ಅಂಬೇಡ್ಕರ್ ವಾದಿಗಳಾಗುವುದಿಲ್ಲ. ಅವರನ್ನು ಓದಿಕೊಳ್ಳಬೇಕು, ಹೆಚ್ಚು ಅಧ್ಯಯನ ನಡೆಸಬೇಕು. ಅಧ್ಯಯನದ ಮೂಲಕ ಯಾವುದು ಸರಿ, ಯಾವುದು ಸರಿ ಅಲ್ಲ ಎಂದು ಯೋಚಿಸಬೇಕು. ದೇಶ ನಡೆಸುವುದಕ್ಕೆ ಸಂವಿಧಾನದ ಯಾವ ಅಂಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಅರ್ಥ ಮಾಡಿಕೊಂಡಾಗ ಮಾತ್ರ ಕೋರೆಗಾಂವ್ ಯುದ್ಧ ಯಾಕೆ ನಡೆಯಿತು ಎಂದು ಅರ್ಥ ಆಗುತ್ತದೆ ಎಂದು ಅವರು ನುಡಿದರು.
ಕೋರೆಗಾಂವ್ ನಂತಹ ರಕ್ತಪಾತ ಯುದ್ಧಗಳು ನಮಗೆ ಬೇಕಾಗಿಲ್ಲ. ದೇಶದಲ್ಲಿ ಬೇರೂರಿರುವ ಮೌಢ್ಯ, ಅಸ್ಪೃಶ್ಯತೆಯ ವಿರುದ್ಧದ ಯುದ್ಧಗಳು ನಮಗೆ ಬೇಕಾಗುತ್ತದೆ. ದಲಿತರು ಶೋಕಿಗಾಗಿ ಯಾವುದೋ ಒಂದು ಪಕ್ಷವನ್ನು ನಂಬಿಕೊಂಡು ಪಕ್ಷದ ಗುಲಾಮರಾಗಬಾರದು. ವಿದ್ಯಾವಂತ ಯುವಕರು ದಲಿತರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುವ ರೀತಿಯಲ್ಲಿ ಪ್ರಯತ್ನ ಮಾಡಬೇಕು ಎಂದು ಬಿ.ಟಿ.ಲಲಿತಾ ನಾಯಕ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅಹಿಂದ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಡಾ.ಎಂ.ಮುತ್ತುರಾಜು, ಸಮತಾ ಸೈನಿಕ ದಳ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ, ನಿವೃತ್ತ ಅಧಿಕಾರಿ ಭೀಮಾ ಶಂಕರ್, ಪತ್ರಕರ್ತ ಜಿ.ಆಂಜಿನಪ್ಪ, ಹೋರಾಟಗಾರ ಎಚ್.ಪ್ರದೀಪ್ ಸೇರಿದಂತೆ ಹಲವರು ಭಾಗವಹಿಸಿದ್ದರು.